ಗುವಾಹಟಿ: ಮನೆಯಲ್ಲಿ ಜಗಳ ತಾರಕಕ್ಕೇರಿದ ವೇಳೆ 38 ವರ್ಷದ ಮಹಿಳೆಯೊಬ್ಬಳು ತನ್ನ 42 ವರ್ಷದ ಕುಡುಕ ಗಂಡನನ್ನು ಕೊಂದು, ಭಯದಿಂದ ಶವವನ್ನು ತಮ್ಮ ಮನೆಯ ಆವರಣದಲ್ಲೇ 5 ಅಡಿ ಆಳದ ಗುಂಡಿಯಲ್ಲಿ ಹೂತುಹಾಕಿದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಆರೋಪಿಯಾದ ರಹೀಮಾ ಖಾತುನ್ ಎಂಬ ಮಹಿಳೆಯನ್ನು ಗುವಾಹಟಿ ಪೊಲೀಸರು ಬಂಧಿಸಿದ್ದು, ಕೊಲೆ ಮಾಡಿರುವುದಾಗಿ ಆಕೆಯೇ ತಪ್ಪೊಪ್ಪಿಕೊಂಡಿದ್ದಾಳೆ.
ಗುವಾಹಟಿಯ ಚಾಂಗ್ಸಾರಿಯ ಚಿಕಾನ್ ಗ್ರಾಮದ ನಿವಾಸಿಯಾದ ರಹೀಮಾ ಖಾತುನ್ ಹಾಗೂ ಪತಿಯ ನಡುವೆ ಜೂನ್ 26 ರಂದು ಜೋರಾಗಿ ಜಗಳ ನಡೆದಿದೆ. ಆ ದಿನ, ವಿಪರೀತ ಕುಡಿದಿದ್ದ ಗಂಡ, ರಹೀಮಾ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದಾನೆ. ಈ ಜಗಳದ ತಾರಕಕ್ಕೇರಿದಾಗ ಆಕ್ರೋಶಭರಿತರಾಗಿದ್ದ ರಹೀಮಾ ತನ್ನ ಗಂಡನನ್ನು ಕೊಂದಿದ್ದಾಳೆ. ಕೊಲೆಯ ನಂತರ, ತಾನು ಎಸಗಿದ ಅಪರಾಧವನ್ನು ಮರೆಮಾಚಲು, ಆಕೆ ಶವವನ್ನು ಮನೆಯ ಆವರಣದಲ್ಲಿ 5 ಅಡಿ ಆಳದ ಗುಂಡಿ ತೆಗೆದು ಹೂತುಹಾಕಿದ್ದಾಳೆ.
ಅಕ್ಕಪಕ್ಕದ ಮನೆಯವರು ಪತಿಯ ಬಗ್ಗೆ ವಿಚಾರಿಸಿದಾಗ, ಗಂಡ ಕೇರಳಕ್ಕೆ ಕೆಲಸಕ್ಕಾಗಿ ತೆರಳಿದ್ದಾನೆ ಎಂದು ರಹೀಮಾ ಸುಳ್ಳು ಹೇಳಿದ್ದಳು. ಆದರೆ, ಗಂಡನ ಸಂಬಂಧಿಕರಿಗೆ ಈ ವಿಷಯದ ಬಗ್ಗೆ ಸಂದೇಹ ಬಂದಿದ್ದು, ಅವರು ಗುವಾಹಟಿ ಪೊಲೀಸ್ ಠಾಣೆಯಲ್ಲಿ ಆತ ನಾಪತ್ತೆಯಾಗಿದ್ದಾಗಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ರಹೀಮಾ ಖಾತುನ್ ಅವರ ಮನೆಗೆ ತೆರಳಿ ತಪಾಸಣೆ ನಡೆಸಿದಾಗ, ಮನೆಯ ಆವರಣದಲ್ಲಿ ಹೂತುಹಾಕಲಾಗಿದ್ದ ಗಂಡನ ಕೊಳೆತ ಶವ ಪತ್ತೆಯಾಯಿತು.
ಶವವನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಭೂಮಿಯಿಂದ ಹೊರತೆಗೆಯಲಾಯಿತು. ಶವಪರೀಕ್ಷೆಯ ವರದಿಯು ಕೊಲೆಯಾಗಿರುವುದನ್ನು ದೃಢಪಡಿಸಿದೆ. ವಿಚಾರಣೆಯ ಸಂದರ್ಭದಲ್ಲಿ ರಹೀಮಾ ತನ್ನ ಅಪರಾಧವನ್ನು ಒಪ್ಪಿಕೊಂಡು, ಗಂಡನನ್ನು ಕೊಂದು ಶವವನ್ನು ಹೂತುಹಾಕಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ರಹೀಮಾ ಖಾತುನ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.