ನವದೆಹಲಿ: ತಂದೆಯಿಂದಲೇ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರಿಗೆ ಕುಟುಂಬದಲ್ಲಿ ಆಗುತ್ತಿದ್ದ ಹಿಂಸೆಯ ವಿಚಾರವನ್ನು ರಾಧಿಕಾ ಅವರ ಆತ್ಮೀಯ ಸ್ನೇಹಿತೆ ಹಿಮಾಂಶಿಕಾ ಸಿಂಗ್ ಬಾಯಿಬಿಟ್ಟಿದ್ದಾರೆ. ರಾಧಿಕಾ ಹತ್ಯೆಯ ಬೆನ್ನಲ್ಲೇ ಹಿಮಾಂಶಿಕಾ ಮೌನ ಮುರಿದಿದ್ದಾರೆ. ರಾಧಿಕಾ ತನ್ನ ಜೀವನದಲ್ಲಿ ಎದುರಿಸಿದ ತೀವ್ರ ಕಷ್ಟಗಳು, ವಿಶೇಷವಾಗಿ ತಂದೆಯಿಂದ ಎದುರಿಸಿದ ಕಟ್ಟುನಿಟ್ಟಾದ ನಿಯಂತ್ರಣ ಮತ್ತು ನಿರಂತರ ಒತ್ತಡದಿಂದಾಗಿ ಅವಳ ಜೀವನ ದುಸ್ತರವಾಗಿತ್ತು ಎಂದು ಹಿಮಾಂಶಿಕಾ ಹೇಳಿದ್ದಾರೆ.
2012ರಿಂದ ರಾಧಿಕಾಳೊಂದಿಗೆ ಸ್ನೇಹ ಹೊಂದಿರುವ ಹಿಮಾಂಶಿಕಾ, ರಾಧಿಕಾ ತನ್ನ ಹೆತ್ತವರಿಂದ ಕಟ್ಟುನಿಟ್ಟಾದ ನಿಯಂತ್ರಣಕ್ಕೆ ಒಳಗಾಗಿದ್ದಳು ಎಂದು ಆರೋಪಿಸಿದ್ದಾರೆ.
ಹಿಮಾಂಶಿಕಾ ಸಿಂಗ್ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ರಾಧಿಕಾಳ ಪ್ರತಿಯೊಂದು ಚಲನವಲನಗಳನ್ನೂ ಆಕೆಯ ಕುಟುಂಬವು ನಿಯಂತ್ರಿಸುತ್ತಿತ್ತು. “ರಾಧಿಕಾ ನನ್ನೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುವಾಗಲೂ, ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂದು ತನ್ನ ಪೋಷಕರಿಗೆ ತೋರಿಸಬೇಕಿತ್ತು. ಟೆನಿಸ್ ಅಕಾಡೆಮಿ ಅವರ ಮನೆಯಿಂದ ಕೇವಲ 15 ನಿಮಿಷಗಳ ದೂರದಲ್ಲಿದ್ದರೂ, ಅವಳಿಗೆ ಮನೆಗೆ ಮರಳಲು ಕಟ್ಟುನಿಟ್ಟಾದ ಸಮಯವನ್ನು ನಿಗದಿಪಡಿಸಲಾಗಿತ್ತು” ಎಂದು ಹಿಮಾಂಶಿಕಾ ತಿಳಿಸಿದ್ದಾರೆ.

ರಾಧಿಕಾಳದ್ದು ವಿಪರೀತ ಸಂಪ್ರದಾಯಸ್ಥರ ಕುಟುಂಬ. ಹೀಗಾಗಿ, ರಾಧಿಕಾಳ ಜೀವನಶೈಲಿಯ ಬಗ್ಗೆ ಅವರಿಗೆ ಭಾರೀ ಆಕ್ಷೇಪಗಳಿದ್ದವು ಎಂದೂ ಹಿಮಾಂಶಿಕಾ ಹೇಳಿದ್ದಾರೆ.
ತಮ್ಮ ಇನ್ನೊಂದು ಪೋಸ್ಟ್‌ನಲ್ಲಿ, ಹಿಮಾಂಶಿಕಾ ರಾಧಿಕಾಳ ತಂದೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. “ಅವರ ತಂದೆಯ ಅಧಿಕಾರಶಾಹಿ ಸ್ವಭಾವ ಮತ್ತು ನಿರಂತರ ಟೀಕೆಗಳು ರಾಧಿಕಾಳ ಜೀವನವನ್ನು ವರ್ಷಗಟ್ಟಲೆ ಕಷ್ಟಕರವಾಗಿಸಿದವು. ಶಾರ್ಟ್ಸ್ ಧರಿಸಿದ್ದಕ್ಕೆ, ಗಂಡು ಮಕ್ಕಳೊಂದಿಗೆ ಮಾತನಾಡಿದ್ದಕ್ಕೆ, ತನ್ನ ಇಷ್ಟದಂತೆ ಸುತ್ತಾಡಿದ್ದಕ್ಕೆ ಅವಳನ್ನು ಹೀಗಳೆಯಲಾಗುತ್ತಿತ್ತು” ಎಂದು ಹಿಮಾಂಶಿಕಾ ಬರೆದಿದ್ದಾರೆ.
ರಾಧಿಕಾಳನ್ನು “ದಯಾಳು, ಮುಗ್ಧ ಮತ್ತು ಸೌಮ್ಯ ಸ್ವಭಾವದವಳು” ಎಂದು ಬಣ್ಣಿಸಿರುವ ಹಿಮಾಂಶಿಕಾ, ರಾಧಿಕಾ ವಿಡಿಯೋ ಶೂಟಿಂಗ್ ಮತ್ತು ಛಾಯಾಗ್ರಹಣದಂತಹ ಹವ್ಯಾಸಗಳನ್ನು ಇಷ್ಟಪಡುತ್ತಿದ್ದಳು. ಆದರೆ, ಕುಟುಂಬದ ಒತ್ತಡದಿಂದಾಗಿ ಈ ಹವ್ಯಾಸಗಳನ್ನು ಕೈಬಿಡಬೇಕಾಯಿತು. “ಕ್ರಮೇಣ, ಅವಳ ಎಲ್ಲಾ ಹವ್ಯಾಸಗಳು ಒಂದೊಂದಾಗಿ ಕಣ್ಮರೆಯಾದವು. ಅವಳ ಮೇಲೆ ಮನೆಯಲ್ಲಿ ತೀವ್ರ ಒತ್ತಡವಿತ್ತು.
ಸಮಾಜದ ಒತ್ತಡವೂ ಕುಟುಂಬದ ಮೇಲೆ ಇತ್ತು. ಅವಳ ಹೆತ್ತವರು ಯಾವಾಗಲೂ ‘ಜನ ಏನು ಹೇಳುತ್ತಾರೆ’ ಎಂಬ ಚಿಂತೆಯಲ್ಲೇ ಇರುತ್ತಿದ್ದರು. ಅವರು ತುಂಬಾ ಸಂಪ್ರದಾಯವಾದಿಗಳಾಗಿದ್ದ ಕಾರಣ, ರಾಧಿಕಾಳ ಆಧುನಿಕ ವೇಷಭೂಷಣ, ನಡೆಗಳು ಅವರನ್ನು ತೀವ್ರ ಚಿಂತೆಗೀಡುಮಾಡಿದ್ದವು” ಎಂದು ಹಿಮಾಂಶಿಕಾ ಹೇಳಿದ್ದಾರೆ.
“ರಾಧಿಕಾ ಬಹಳಷ್ಟು ಜನರೊಂದಿಗೆ ಮಾತೇ ಆಡುತ್ತಿರಲಿಲ್ಲ. ಇದಕ್ಕೆ ಕಾರಣ ಮನೆಯವರ ಆಕ್ಷೇಪ. ಮನೆಯಲ್ಲಿ ಒಂದಿಲ್ಲೊಂದು ನಿರ್ಬಂಧಗಳಿದ್ದವು. ಇದರಿಂದ ಅವಳಿಗೆ ಉಸಿರುಗಟ್ಟಿದಂತೆ ಭಾಸವಾಗುತ್ತಿತ್ತು. ಎಲ್ಲದಕ್ಕೂ ಅವಳು ಉತ್ತರಿಸಬೇಕಿತ್ತು” ಎಂದು ಹಿಮಾಂಶಿಕಾ ತಿಳಿಸಿದ್ದಾರೆ.



















