ಬೀದರ್ ನಗರದಲ್ಲಿ ಮಹಿಳೆಯೋರ್ವಳು 6 ತಿಂಗಳ ಮಗುವನ್ನು ಬಳಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ವೇಳೆ ರಕ್ಷಣಾ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮಗು ರಕ್ಷಿಸಿದ್ದಾರೆ.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಗುವನ್ನು ರಕ್ಷಿಸಿದ್ದಾರೆ. ಬೀದರ್ ನ ಶಿವನಗರದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಓರ್ವ ವೃದ್ಧೆ ರಾತ್ರಿ ಹೊತ್ತು ಚಿಕ್ಕ ಮಗು ಬಳಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದರು. ರಾತ್ರಿ ವೇಳೆ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧಿಕಾರಿಯನ್ನೇ ವೃದ್ಧೆ ಭಿಕ್ಷೆ ಕೇಳಿದ್ದಾಳೆ. ಆ ವೇಳೆ ಚಿಕ್ಕ ಮಗು ಕಂಡಿದೆ. ಆಗ ವೃದ್ಧೆಗೆ ಜಿಲ್ಲಾಧಿಕಾರಿ ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿ ಪ್ರಶ್ನಿಸುತ್ತಿದ್ದಂತೆ ವೃದ್ಧೆ ಮಗು ತೆಗೆದುಕೊಂಡು ಓಡಿ ಹೋಗಿದ್ದಾಳೆ.
ಕೂಡಲೇ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮಗು ಹಾಗೂ ವೃದ್ಧೆಯನ್ನು ಪತ್ತೆ ಹಚ್ಚಲಾಗಿದೆ. ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.



















