ಲಂಡನ್: ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ನೆಚ್ಚಿನ ತವರಿನ ಮೈದಾನದಲ್ಲಿ ದಾಖಲೆಯ 8ನೇ ಟೆಸ್ಟ್ ಶತಕ ಸಿಡಿಸುವ ಮೂಲಕ ಸಂಭ್ರಮಿಸಿದ ರೂಟ್, ಇದೇ ವೇಳೆ ಭಾರತದ ರಾಹುಲ್ ದ್ರಾವಿಡ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ದಾಖಲೆಗಳನ್ನು ಹಿಂದಿಕ್ಕಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ 5ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದು ರೂಟ್ ಅವರ ವೃತ್ತಿಜೀವನದ 37ನೇ ಟೆಸ್ಟ್ ಶತಕವಾಗಿದೆ.
ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 99 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ರೂಟ್, ಎರಡನೇ ದಿನವಾದ ಶುಕ್ರವಾರ (ಜುಲೈ 11, 2025) ಜಸ್‌ಪ್ರೀತ್ ಬುಮ್ರಾ ಅವರ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ತಮ್ಮ ಶತಕವನ್ನು ಪೂರೈಸಿದರು. ಈ ಸಾಧನೆಯೊಂದಿಗೆ, ಅವರು ಈ ಹಿಂದೆ ತಲಾ 36 ಶತಕಗಳನ್ನು ಗಳಿಸಿದ್ದ ರಾಹುಲ್ ದ್ರಾವಿಡ್ ಮತ್ತು ಸ್ಟೀವ್ ಸ್ಮಿತ್ ಅವರೊಂದಿಗೆ ಜಂಟಿ ದಾಖಲೆಯನ್ನು ಮುರಿದು, ಅವರಿಗಿಂತ ಮುಂದೆ ಸಾಗಿದ್ದಾರೆ.
ಪ್ರಸ್ತುತ ಕ್ರಿಕೆಟ್ ಆಡುತ್ತಿರುವವರ ಪೈಕಿ, ಜೋ ರೂಟ್ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 36 ಶತಕಗಳೊಂದಿಗೆ ಸ್ಟೀವ್ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ. ರೂಟ್ ಇನ್ನೊಂದು ಶತಕ ಬಾರಿಸಿದರೆ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ (38 ಶತಕ) ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವ ದಾಖಲೆ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ (51 ಶತಕ) ಹೆಸರಿನಲ್ಲಿದೆ.
ಲಾರ್ಡ್ಸ್‌ನಲ್ಲಿ ರೂಟ್ ಅಧಿಪತ್ಯ
‘ಕ್ರಿಕೆಟ್ ಕಾಶಿ’ ಎಂದೇ ಪ್ರಖ್ಯಾತಿ ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ರೂಟ್ ಬಾರಿಸಿದ ಇದು 8ನೇ ಟೆಸ್ಟ್ ಶತಕವಾಗಿದೆ. ಈ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ಶತಕಗಳನ್ನು ಬಾರಿಸಿದ ದಾಖಲೆ ಈಗಾಗಲೇ ರೂಟ್ ಅವರ ಹೆಸರಿನಲ್ಲಿಯೇ ಇತ್ತು. ಇದೀಗ ಮತ್ತೊಂದು ಶತಕವನ್ನು ಈ ಪಟ್ಟಿಗೆ ಸೇರಿಸಿದ್ದಾರೆ.
ಲಾರ್ಡ್ಸ್‌ನಲ್ಲಿ ಆಡಿದ ಒಟ್ಟು 24 ಪಂದ್ಯಗಳ 42 ಇನ್ನಿಂಗ್ಸ್‌ಗಳಲ್ಲಿ ರೂಟ್ ಈ ಸಾಧನೆ ಮಾಡಿದ್ದಾರೆ. ಇಲ್ಲಿ ಅವರ ಗರಿಷ್ಠ ವೈಯಕ್ತಿಕ ಮೊತ್ತ ಅಜೇಯ 200 ರನ್‌ಗಳಾಗಿದ್ದು, 8 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಗಮನಾರ್ಹವಾಗಿ, ಅವರು ಕೇವಲ ಒಂದು ಬಾರಿ ಮಾತ್ರ ಲಾರ್ಡ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ರೂಟ್ ನಂತರ ಲಾರ್ಡ್ಸ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರು ಮಾಜಿ ನಾಯಕರಾದ ಮೈಕಲ್ ವಾನ್ ಮತ್ತು ಗ್ರಹಾಂ ಗೂಚ್ – ಇವರಿಬ್ಬರೂ ತಲಾ 6 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.
ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಾಧಕರು:
- ಸಚಿನ್ ತೆಂಡೂಲ್ಕರ್ (ಭಾರತ) – 51 ಶತಕಗಳು
- ಜಾಕ್ ಕ್ಯಾಲಿಸ್ (ದಕ್ಷಿಣ ಆಫ್ರಿಕಾ) – 45 ಶತಕಗಳು
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 41 ಶತಕಗಳು
- ಕುಮಾರ್ ಸಂಗಕ್ಕಾರ (ಶ್ರೀಲಂಕಾ) – 38 ಶತಕಗಳು
- ಜೋ ರೂಟ್ (ಇಂಗ್ಲೆಂಡ್) – 37* ಶತಕಗಳು
“ಶಾನ್ ಮಸೂದ್, ಭಾರತದ ನಾಯಕ” : ಕಾಮೆಂಟರಿ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಶಾನ್ ಪೊಲಾಕ್ ಅವರಿಂದ ಮಹಾ ಪ್ರಮಾದ!