ನವದೆಹಲಿ: ದೆಹಲಿಯ ಜನಪ್ರಿಯ ಮಜ್ನು ಕಾ ಟಿಲ್ಲಾ ಪ್ರದೇಶದಲ್ಲಿ 22 ವರ್ಷದ ಮಹಿಳೆ ಮತ್ತು 6 ತಿಂಗಳ ಮಗುವನ್ನು ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಗೈದಿದ್ದಾನೆ. ಈ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಉತ್ತರಾಖಂಡ ಮೂಲದ 24 ವರ್ಷದ ನಿಖಿಲ್ ಎಂಬಾತನನ್ನು ಹಲವು ರಾಜ್ಯಗಳಲ್ಲಿ ನಡೆಸಿದ ಶೋಧದ ನಂತರ ಬುಧವಾರ ಹಲ್ದ್ವಾನಿಯಲ್ಲಿ ಬಂಧಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಸೋನಲ್ (22) ಮತ್ತು ಆಕೆಯ ಸ್ನೇಹಿತೆಯ 6 ತಿಂಗಳ ಮಗಳನ್ನು ಕೊಲೆ ಮಾಡಿರುವ ಆರೋಪವನ್ನು ನಿಖಿಲ್ ಎದುರಿಸುತ್ತಿದ್ದಾನೆ.
ಪೊಲೀಸರ ಪ್ರಕಾರ, ಈ ಕೊಲೆಗಳನ್ನು ಸರ್ಜಿಕಲ್ ಬ್ಲೇಡ್ ಬಳಸಿ ನಡೆಸಲಾಗಿದೆ. ನಿಖಿಲ್ ಸ್ಥಳದಿಂದ ಪರಾರಿಯಾಗಿ, ಆತ್ಮಹತ್ಯೆಗೆ ಪ್ರಯತ್ನಿಸಿ, ನಂತರ ಹಲವು ನಗರಗಳಲ್ಲಿ ಸಂಚರಿಸಿ ಕೊನೆಗೆ ಹಲ್ದ್ವಾನಿಯಲ್ಲಿ ಪತ್ತೆಯಾಗಿದ್ದಾನೆ. ಅಲ್ಲಿ ಅವನನ್ನು ಬಂಧಿಸಲಾಗಿದೆ.
ನಿಖಿಲ್ ಮತ್ತು ಸೋನಲ್ 2023 ರಲ್ಲಿ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಬಳಿಕ ಅವರಿಬ್ಬರೂ ಲಿವ್ ಇನ್ ಸಂಬಂಧದಲ್ಲಿ ಒಂದೇ ಮನೆಯಲ್ಲಿ ವಾಸಿಸತೊಡಗಿದರು. ಆ ವರ್ಷದ ಕೊನೆಯಲ್ಲಿ ಸೋನಲ್ ಗರ್ಭಿಣಿಯಾದಳು. ಪೊಲೀಸರ ಪ್ರಕಾರ, ಅವಿವಾಹಿತರಾಗಿದ್ದ ಮತ್ತು ಆರ್ಥಿಕ ಸಂಕಷ್ಟದಲ್ಲಿದ್ದ ಈ ದಂಪತಿಗೆ ಮಗುವನ್ನು ಬೆಳೆಸುವ ಇರಾದೆ ಇರಲಿಲ್ಲ.
ಆರಂಭದಲ್ಲಿ ಗರ್ಭಪಾತಕ್ಕೆ ಪ್ರಯತ್ನಿಸಿದ್ದರೂ, ಅದು ಯಶಸ್ವಿಯಾಗಲಿಲ್ಲ. 2024ರ ಆರಂಭದಲ್ಲಿ ಮಗು ಜನಿಸಿತು. ಕೊನೆಗೆ ಈ ದಂಪತಿ ಮಗುವನ್ನು ಅಲ್ಮೋರಾದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ.ಗೆ ಮಾರಾಟ ಮಾಡಿದರು. ಈ ಹಣದಿಂದ ಅವರು ದೆಹಲಿಗೆ ಸ್ಥಳಾಂತರಗೊಂಡರು, ಆರಂಭದಲ್ಲಿ ವಜೀರಾಬಾದ್‌ನಲ್ಲಿ ಉಳಿದು ನಂತರ ಮಜ್ನು ಕಾ ಟಿಲ್ಲಾಗೆ ಸ್ಥಳಾಂತರಗೊಂಡರು.
ದೆಹಲಿಯಲ್ಲಿ ಸೋನಲ್‌ಗೆ ಸ್ಥಳೀಯ ನಿವಾಸಿ ರಶ್ಮಿಯೊಂದಿಗೆ ಪರಿಚಯವಾಯಿತು. ಸೋನಲ್ ಆಗಾಗ್ಗೆ ರಶ್ಮಿ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದಳು ಮತ್ತು ನಿಖಿಲ್‌ನೊಂದಿಗೆ ಪದೇ ಪದೇ ಜಗಳಗಳಾದ ನಂತರ ಅವನಿಂದ ಬೇರ್ಪಟ್ಟು ರಶ್ಮಿ ಮನೆಯಲ್ಲೇ ವಾಸಿಸಲು ಪ್ರಾರಂಭಿಸಿದಳು.
ಎರಡನೇ ಗರ್ಭಧಾರಣೆ ಮತ್ತು ವೈಮನಸ್ಸು:
ಪೊಲೀಸ್ ಮೂಲಗಳ ಪ್ರಕಾರ, ರಶ್ಮಿಯ ಪತಿ ದುರ್ಗೇಶ್ ಜೊತೆ ಸೋನಲ್ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ನಿಖಿಲ್‌ಗೆ ಶುರುವಾಯಿತು. ಇವರಿಬ್ಬರ ನಡುವಿನ ವಾಟ್ಸಾಪ್ ಚಾಟ್‌ಗಳನ್ನು ನಿಖಿಲ್ ಪತ್ತೆಹಚ್ಚಿ, ಆ ಬಗ್ಗೆ ಸೋನಲ್‌ಳನ್ನು ಪ್ರಶ್ನಿಸಿದ್ದ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ರಾಜಾ ಬಂತಿಯಾ ಹೇಳಿದ್ದಾರೆ.
ಈ ಅವಧಿಯಲ್ಲಿ ಸೋನಲ್ ಮತ್ತೆ ಗರ್ಭಿಣಿಯಾದಳು. ಈ ಬಾರಿ ನಿಖಿಲ್ ಹೇಗಾದರೂ ಮಾಡಿ ಮಗುವನ್ನು ಉಳಿಸಿಕೊಳ್ಳಬೇಕು ಮತ್ತು ಅವಳೊಂದಿಗೆ ನೆಲೆಸಬೇಕು ಎಂದು ನಿರ್ಧರಿಸಿದ್ದ. ಆದರೆ, ಸೋನಲ್ ಅವನಿಗೆ ತಿಳಿಸದೆ ಗರ್ಭಪಾತ ಮಾಡಿಸಿಕೊಳ್ಳಲು ನಿರ್ಧರಿಸಿದಳು. ದುರ್ಗೇಶ್ ಸೂಚನೆಯ ಮೇರೆಗೆ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎನ್ನುವುದು ನಿಖಿಲ್ ಸಿಟ್ಟಿಗೆ ಕಾರಣ.
ಸುಮಾರು 20-25 ದಿನಗಳಿಂದಲೂ ರಶ್ಮಿಯ ಕುಟುಂಬದೊಂದಿಗೇ ಸೋನಲ್ ವಾಸಿಸುತ್ತಿದ್ದಳು. ಈ ಸಮಯದಲ್ಲಿ ನಿಖಿಲ್ ಅವಳೊಂದಿಗೆ ವಾಸಿಸದಿದ್ದರೂ, ಅವಳನ್ನು ಹಿಂದಿರುಗುವಂತೆ ಮನವೊಲಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದ.
ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ರಶ್ಮಿ ಮತ್ತು ದುರ್ಗೇಶ್ ತಮ್ಮ ಐದು ವರ್ಷದ ಹಿರಿಯ ಮಗಳನ್ನು ಶಾಲೆಯಿಂದ ಕರೆತರಲು ಮಜ್ನು ಕಾ ಟಿಲ್ಲಾದಲ್ಲಿರುವ ತಮ್ಮ ಮನೆಯಿಂದ ಹೊರಟಿದ್ದರು. ಈ ವೇಳೆ ದಂಪತಿಯ 6 ತಿಂಗಳ ಮಗಳೊಂದಿಗೆ ಮನೆಯಲ್ಲಿ ಸೋನಲ್ ಇದ್ದಳು. ಯಾರೂ ಇಲ್ಲದ ಸಂದರ್ಭ ನೋಡಿಕೊಂಡು, ನಿಖಿಲ್ ಮನೆಗೆ ನುಗ್ಗಿದನು.
ಬ್ಲೇಡ್ ಹಿಡಿದುಕೊಂಡೇ ಆತ ಬಂದಿದ್ದ. ನಂತರ ಅವನ ಮತ್ತು ಸೋನಲ್ ನಡುವೆ ಭಾರೀ ಜಗಳ ಏರ್ಪಟ್ಟಿತು. ಕೊನೆಗೆ ನಿಖಿಲ್ ಬ್ಲೇಡ್ ಬಳಸಿ ಸೋನಲ್ ಗಂಟಲನ್ನು ಸೀಳಿದ. ಸೋನಲ್‌ಳನ್ನು ಕೊಂದ ನಂತರ, ನಿಖಿಲ್ ಮಗುವಿನ ಕಡೆಗೆ ತಿರುಗಿದ್ದು, ತನ್ನ ಹುಟ್ಟಲಿರುವ ಮಗುವಿನ ಗರ್ಭಪಾತಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆ 6 ತಿಂಗಳ ಮಗುವನ್ನೂ ಕೊಲೆಗೈದ.
“ಅವರಿಬ್ಬರೂ ಕೂಗಾಡುವ ಸದ್ದು ಯಾರಿಗೂ ಕೇಳಿಸಬಾರದೆಂದು ಆತ ಸೋನಲ್ ಮತ್ತು ಮಗುವಿನ ಬಾಯಿಗೆ ಟೇಪ್ ಅಂಟಿಸಿದ್ದ. ನಂತರ ಅವನು ಮಹಿಳೆಯ ಗಂಟಲನ್ನು ಸೀಳಿ, ಮಗುವಿನ ಶಿರಚ್ಛೇದ ಮಾಡಿದ” ಎಂದು ಮಗುವಿನ ಚಿಕ್ಕಪ್ಪ ರವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಂತರ ಆತ ತನ್ನ ಮೊಬೈಲ್ ಫೋನ್ ಅನ್ನು ಅಲ್ಲೇ ಬಿಟ್ಟು, ಅಲ್ಲಿಂದ ಪರಾರಿಯಾದ.
ರಶ್ಮಿ ಮತ್ತು ದುರ್ಗೇಶ್ ತಮ್ಮ ಹಿರಿಯ ಮಗಳೊಂದಿಗೆ ಶಾಲೆಯಿಂದ ಹಿಂದಿರುಗಿದಾಗ, ಸೋನಲ್ ಮತ್ತು ಮಗುವಿನ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದರು.
ನಿಖಿಲ್ ಮೊದಲು ತನ್ನ ಮನೆಗೆ ವಾಪಸಾಗಿ, ಆತ್ಮಹತ್ಯೆಗೆ ಯತ್ನಿಸಿದ್ದು, ಅದು ಸಾಧ್ಯವಾಗದೇ ಹಳೆಯ ದೆಹಲಿ ರೈಲು ನಿಲ್ದಾಣಕ್ಕೆ ಹೋಗಿ, ನಂತರ ಬರೇಲಿಗೆ ಪ್ರಯಾಣಿಸಿ ಹಲ್ದ್ವಾನಿಯನ್ನು ತಲುಪಿದನು. ಅಲ್ಲಿ ಅವನು ತನ್ನ ಸಹೋದರಿಯ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದ.