ವಾಷಿಂ: ಮಹಾರಾಷ್ಟ್ರದ ವಾಷಿಂ ಜಿಲ್ಲೆಯ ಟೋಂಡಗಾವ್ ಟೋಲ್ ಪ್ಲಾಜಾದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ದಾಂಧಲೆ ನಡೆಸಿ ಹಲವಾರು ಟೋಲ್ ಬೂತ್‌ಗಳನ್ನು ಧ್ವಂಸಗೊಳಿಸಿದ ಘಟನೆ ಬುಧವಾರ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಕೆಲವು ಎಂಎನ್‌ಎಸ್ ಕಾರ್ಯಕರ್ತರು ಕಬ್ಬಿಣದ ರಾಡ್‌ಗಳಿಂದ ಟೋಂಡಗಾವ್ ಟೋಲ್ ಬೂತ್‌ಗಳ ಗಾಜಿನ ಫಲಕಗಳನ್ನು ಒಡೆಯುತ್ತಿರುವುದು ಕಂಡುಬಂದಿದೆ.
ಪಕ್ಷದ ಜಿಲ್ಲಾಧ್ಯಕ್ಷ ರಾಜು ಪಾಟೀಲ್ ಕಿಡ್ಸೆ ಅವರ ಪ್ರಕಾರ, ಟೋಲ್ ಪ್ಲಾಜಾ ನಂತರದ ರಸ್ತೆ ಇನ್ನೂ ಬಳಕೆಗೆ ಸಿದ್ಧವಾಗಿಲ್ಲವಾದರೂ, ಟೋಲ್ ಸಂಗ್ರಹಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. “ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ, ನಾವು ಇದನ್ನು ಪದೇ ಪದೇ ಈ ಕುರಿತು ಮನವಿ ಮಾಡಿದ್ದೇವೆ. ಅಲ್ಲದೆ, ನೆರೆಹೊರೆಯ ಕಾನೇರ್‌ಗಾವ್ ಗ್ರಾಮದವರೆಗಿನ ರಸ್ತೆ ಪೂರ್ಣಗೊಂಡಿಲ್ಲ, ಆದರೂ ಟೋಲ್ ಸಂಗ್ರಹ ಪ್ರಾರಂಭವಾಗಿದೆ. ಹೀಗಾಗಿ ಟೋಲ್ ಬೂತ್ ಧ್ವಂಸ ಮಾಡಿದ್ದೇವೆ” ಎಂದು ಕಿಡ್ಸೆ ಹೇಳಿದ್ದಾರೆ.
ಎಂಎನ್‌ಎಸ್ ಪಕ್ಷವು ಸರಣಿ ಹಲ್ಲೆ ಪ್ರಕರಣಗಳಿಂದ ಸುದ್ದಿಯಲ್ಲಿರುವಂತೆಯೇ ಈ ಘಟನೆ ನಡೆದಿದ್ದು, ಮತ್ತೊಮ್ಮೆ ದೇಶದ ಗಮನ ಸೆಳೆದಿವೆ.
ಕಳೆದ ತಿಂಗಳು, ಮುಂಬೈನಲ್ಲಿ ರಾಜಸ್ಥಾನದ ಅಂಗಡಿಯ ಮಾಲಿಕನಿಗೆ ಮರಾಠಿ ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿತ್ತು. ಜೂನ್ 29 ರಂದು ನಡೆದ ಈ ಹಲ್ಲೆಯ ವಿಡಿಯೋ ವ್ಯಾಪಕವಾಗಿ ಹಂಚಿಕೆಯಾಗಿತ್ತು. ವಿಡಿಯೋದಲ್ಲಿ, ಎಂಎನ್‌ಎಸ್ ಗೂಂಡಾಗಳು 48 ವರ್ಷದ ಬಾಬುಲಾಲ್ ಖಿಮ್ಜಿ ಚೌಧರಿ ಅವರನ್ನು ಸುತ್ತುವರಿದು, ಅವರ ಸಿಬ್ಬಂದಿ ಮರಾಠಿಯಲ್ಲಿ ಮಾತನಾಡದಿದ್ದರೆ ಅಥವಾ ಅವರು ಮಾತನಾಡದಿದ್ದರೆ ಅವರ ವ್ಯವಹಾರವನ್ನು ಬಲವಂತವಾಗಿ ಮುಚ್ಚುವಂತಹ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸುವುದೂ ಕಂಡುಬಂದಿದೆ.
ಇದಲ್ಲದೇ ಇತ್ತೀಚೆಗೆ, ಎಂಎನ್‌ಎಸ್ ಕಾರ್ಯಕರ್ತರು ಹೂಡಿಕೆದಾರ ಸುಶೀಲ್ ಕೇಡಿಯಾ ಅವರ ವರ್ಲಿಯ ಕಚೇರಿ ಮೇಲೆ ದಾಳಿ ನಡೆಸಿದ್ದರು. ಮರಾಠಿ ಕಲಿಯದಿರುವ ಬಗ್ಗೆ ಮತ್ತು ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆಗೆ “ಕ್ಯಾ ಕರ್ನಾ ಹೈ ಬೋಲ್” ಎಂದು ಸವಾಲು ಹಾಕಿದ್ದಕ್ಕಾಗಿ ಕೇಡಿಯಾ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.