ನವದೆಹಲಿ: ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ತಮ್ಮ ಹೆಸರಿನಲ್ಲಿರುವ 400 ರನ್‌ಗಳ ಅತಿ ಹೆಚ್ಚು ವೈಯಕ್ತಿಕ ಟೆಸ್ಟ್ ಸ್ಕೋರ್ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಹೊಂದಿರುವ ಭಾರತೀಯ ಆಟಗಾರನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಭಾರತ ಟೆಸ್ಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಎರಡು ಪಂದ್ಯಗಳ ನಂತರ 1-1ರಲ್ಲಿ ಸಮಬಲ ಸಾಧಿಸಿದೆ. ಇಂತಹ ಸಂದರ್ಭದಲ್ಲಿ, ಲಾರಾ ಅವರ ಹೇಳಿಕೆಗಳು ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ.
ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ವಿಯಾನ್ ಮುಲ್ಡರ್ 334 ಎಸೆತಗಳಲ್ಲಿ 367 ರನ್ ಕಲೆಹಾಕಿದ್ದರು. ಆದರೆ, ಲಾರಾ ಅವರ 400 ರನ್‌ಗಳ ದಾಖಲೆಯನ್ನು ಮುರಿಯಲು ಇಷ್ಟಪಡದೆ, ತಂಡದ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. “ನಮಗೆ ದಾಖಲಾಗಿರುವ ರನ್‌ಗಳು ಸಾಕು, ನಾವು ಬೌಲ್ ಮಾಡುತ್ತೇವೆ. ಬ್ರಿಯಾನ್ ಲಾರಾ ದಂತಕತೆ ಮತ್ತು ಅವರು ನಿಜವಾದ ಹೀರೋ. ಅವರ ದಾಖಲೆಯನ್ನು ವಿಶೇಷವಾಗಿ ಉಳಿಯಲು ಎಲ್ಲರೂ ಬಯಸುತ್ತಾರೆ. ನಾನು ಕೂಡ ಅದೇ ಕೆಲಸ ಮಾಡುತ್ತೇನೆ,” ಎಂದು ಮುಲ್ಡರ್ ಹೇಳಿದ್ದರು.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ದಿಗ್ಗಜ ಆಟಗಾರರಿಗೂ ಲಾರಾ ಅವರ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಆದರೆ, ಸ್ಕೈ ಕ್ರಿಕೆಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಮೈಕಲ್ ಅಥರ್ಟನ್, 2024ರಲ್ಲಿ ಬ್ರಿಯಾನ್ ಲಾರಾ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದರು ಎಂದಿದ್ದಾರೆ.
ಯಶಸ್ವಿ ಜೈಸ್ವಾಲ್‌ಗೆ ದಾಖಲೆ ಮುರಿಯುವ ಸಾಮರ್ಥ್ಯ: ಬ್ರಿಯಾನ್ ಲಾರಾ
ಸಾಕಷ್ಟು ಮಂದಿ ಶುಭಮನ್ ಗಿಲ್ ಲಾರಾ ದಾಖಲೆಯನ್ನು ಮುರಿಯಬಲ್ಲರು ಎಂದು ಅಭಿಪ್ರಾಯಪಟ್ಟಿದ್ದರೂ, ಬ್ರಿಯಾನ್ ಲಾರಾ ಅವರೇ ಯಶಸ್ವಿ ಜೈಸ್ವಾಲ್ ಮತ್ತು ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ಗೆ ತಮ್ಮ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೇ ಯಶಸ್ವಿ ಜೈಸ್ವಾಲ್‌ಗೆ ಈ ಸಾಮರ್ಥ್ಯ ಇದೆ ಎಂದು ಲಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 40 ಇನ್ನಿಂಗ್ಸ್‌ಗಳಿಂದ 53.10 ಸರಾಸರಿಯಲ್ಲಿ 2018 ರನ್ ಕಲೆಹಾಕಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಮೊತ್ತ 214 ರನ್‌ಗಳು. ಮತ್ತೊಂದೆಡೆ, ಹ್ಯಾರಿ ಬ್ರೂಕ್ 45 ಇನ್ನಿಂಗ್ಸ್‌ಗಳಿಂದ 59.52 ಸರಾಸರಿಯಲ್ಲಿ 2619 ರನ್ ಗಳಿಸಿದ್ದಾರೆ ಮತ್ತು ಅವರ ವೈಯಕ್ತಿಕ ಗರಿಷ್ಠ ಮೊತ್ತ 317 ರನ್‌ಗಳು.
ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಶೈಲಿ ಮತ್ತು ಆಕ್ರಮಣಕಾರಿ ಆಟ ಲಾರಾ ಅವರ ದಾಖಲೆಯನ್ನು ಮುರಿಯಲು ಅವರಿಗೆ ನೆರವಾಗಬಹುದೇ ಎಂದು ಕಾದು ನೋಡಬೇಕಿದೆ.



















