ಕಾರ್ಕಳ : ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷವೊಂದನ್ನು ವೈಭವೀಕರಿಸುವುದಕ್ಕೆ ಹೋಗಿ ಪತ್ರಕರ್ತರ ಅವಹೇಳನ ಮಾಡಿರುವ ಇಬ್ಬರು ಪತ್ರಕರ್ತರ ಕ್ಷಮೆ ಯಾಚಿಸಿದ್ದಾರೆ.
ಪ್ರಖ್ಯಾತ್ ಬಿ.ಜೆ ಹಾಗೂ ಹರಿಪ್ರಸಾದ್ ಶೆಟ್ಟಿ ಎನ್ನುವವರು ರಾಜಕೀಯದ ದಾಳದಿಂದ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ನೇತೃತ್ವದಲ್ಲಿ ಪತ್ರಕರ್ತರು ಕಾರ್ಕಳ ಎಸ್ಪಿ ಡಾ. ಹರ್ಷ ಪ್ರಿಯಂವದಾ ಅವರಿಗೆ ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಒತ್ತಾಯಿಸಿದ್ದರು.
ಆರೋಪಿಗಳಾದ ಪ್ರಖ್ಯಾತ್ ಬಿ.ಜೆ ಹಾಗೂ ಹರಿಪ್ರಸಾದ್ ಶೆಟ್ಟಿ ಅವರನ್ನು ಕಾರ್ಕಳ ಪೊಲೀಸರು ಕಚೇರಿಗೆ ಕರೆಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಪೋಸ್ಟ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.
ಈ ಸಂದಭದಲ್ಲಿ ಆರೋಪಿಗಳು ʼನಾವು ಆ ಸಂದರ್ಭದಲ್ಲಿ ಮಾಡಿರುವ ಕಮೆಂಟ್ ಅಪಾರ್ಥವಾಗಿರುವ ವಿಷಯ ನಮಗೆ ತಿಳಿದಿದೆ. ಇನ್ನು ಮುಂದೆ ಹೀಗೆ ಕಮೆಂಟ್ ಮಾಡುವಾದಗಲಿ, ಪೋಸ್ಟ್ ಹಾಕುವುದಾಗಲಿ ಮಾಡುವುದಿಲ್ಲ. ನಮ್ಮನ್ನು ಮನ್ನಿಸಬೇಕುʼ ಎಂದು ಪತ್ರಕರ್ತರ ಕ್ಷಮೆ ಯಾಚಿಸಿದ್ದಾರೆ.
ಆರೋಪಿಗಳಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಗೆ ಇನ್ಮುಂದೆ ಇಂತಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೇ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.