ನವದೆಹಲಿ : ಎನ್.ಡಿ.ಎ ಒಕ್ಕೂಟ ‘ಬಿಹಾರವನ್ನು ಭಾರತದ ಅಪರಾಧ ರಾಜಧಾನಿಯನ್ನಾಗಿ ಮಾಡಿದೆ’ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪಾಟ್ನಾ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಗೆ ಸಂಬಂಧಿಸಿದಂತೆ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ರಾಹುಲ್, ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಟೀಕಿಸಿದ್ದಾರೆ.
ಬಿಹಾರ ಲೂಟಿ, ಗುಂಡಿನ ದಾಳಿ, ಹಾಗೂ ಕೊಲೆಗಳ ನೆರಳಿನಲ್ಲಿ ಬದುಕುತ್ತಿದೆ. ಅಪರಾಧ ಎನ್ನುವುದು ಇಲ್ಲಿನ ಸಾಮಾನ್ಯ ಸ್ಥಿತಿಯಾಗಿದೆ. ಇಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಮಕ್ಕಳನ್ನು ರಕ್ಷಣೆ ಮಾಡದವರಿಗೆ ಮತ ಯಾಕೆ ಎಂದಿರುವ ರಾಗಾ, ಮುಂದಿನ ಚುನಾವಣೆಯಲ್ಲಿ ಈ ಸರ್ಕಾರಕ್ಕೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಪ್ರತಿ ಕೊಲೆ, ಪ್ರತಿ ದರೋಡೆ, ಪ್ರತಿ ಬುಲೇಟ್ ಕೂಡ ಬದಲಾವಣೆಯ ಕೂಗು. ಹೊಸ ಬಿಹಾರಕ್ಕೆ ಈಗ ಸಮಯ ಬಂದಿದೆ. ಭಯದ ಮುಕ್ತ ಪ್ರಗತಿಯ ಹೊಸ ಬಿಹಾರಕ್ಕೆ ಕಾಲ ಕೂಡಿ ಬಂದಿದೆ. ಈ ಬಾರಿ ನಿಮ್ಮ ಮತ ಕೇವಲ ಸರ್ಕಾರಕ್ಕೆ ಮಾತ್ರವಲ್ಲ, ಅದು ಬಿಹಾರದ ರಕ್ಷಣೆಗಾಗಿ ಎಂದು ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಮಗಧ್ ಆಸ್ಪತ್ರೆಯ ಮಾಲೀಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದ ಆಗಂತಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆರು ವರ್ಷಗಳ ಹಿಂದೆ ಬಿಜೆಪಿ ನಾಯಕರಾಗಿದ್ದ ಅವರ ಮಗನನ್ನು ಕೂಡ ಇದೇ ರೀತಿ ಹಾಡಹಗಲಲ್ಲೇ ಹತ್ಯೆ ಮಾಡಲಾಗಿತ್ತು.