ಬೆಂಗಳೂರು: ಹೊಸ ಫೋನ್ ಖರೀದಿ ನಿಮ್ಮ ಪ್ಲಾನ್‌ಗಳಲ್ಲಿದೆಯೇ? 5G ಕ್ರಾಂತಿಗೆ ಸಜ್ಜಾಗಲು 50,000 ರೂಪಾಯಿಗಿಂತ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ಹಾಗಿದ್ದರೆ, ನಿಮಗಿದು ಖುಷಿಯ ಸುದ್ದಿ! ಜುಲೈ 2025ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೊಸ ತಲೆಮಾರಿನ ಫೋನ್‌ಗಳು ನಿಜಕ್ಕೂ ಮೊಬೈಲ್ ಪ್ರಿಯರ ನಿದ್ದೆಗೆಡಿಸಿವೆ. ಪ್ರೀಮಿಯಂ ಫೀಚರ್ಸ್, ಅತಿ ವೇಗದ ಪ್ರೊಸೆಸರ್‌ಗಳು, ಕ್ರಿಸ್ಟಲ್ ಕ್ಲಿಯರ್ ಡಿಸ್‌ಪ್ಲೇಗಳು, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಗಳು ಮತ್ತು ವೃತ್ತಿಪರ ಗುಣಮಟ್ಟದ ಕ್ಯಾಮೆರಾಗಳೊಂದಿಗೆ, ಈ ಫೋನ್‌ಗಳು ಫ್ಲಾಗ್‌ಶಿಪ್ ಫೋನ್‌ಗಳಿಗೆ ಪ್ರಬಲ ಸ್ಪರ್ಧೆ ನೀಡಿವೆ. ಅವುಗಳ ವಿವರ ಇಲ್ಲಿದೆ.
ಒಪ್ಪೋ ರೆನೋ 14 ಪ್ರೋ: ಸೌಂದರ್ಯ ಮತ್ತು ಶಕ್ತಿಯ ಮಿಲನ!
ಒಪ್ಪೋ ರೆನೋ ಸರಣಿಯ ಹೊಸ ತಾರೆ ಒಪ್ಪೋ ರೆನೋ 14 ಪ್ರೋ, ಗಮನ ಸೆಳೆಯುವ ವಿನ್ಯಾಸ, ಭರವಸೆಯ ಕಾರ್ಯಕ್ಷಮತೆ ಮತ್ತು ಅಸಾಧಾರಣ ಬ್ಯಾಟರಿ ಲೈಫ್‌ನೊಂದಿಗೆ ಬಂದಿದೆ. ನುಣುಪಾದ ಮೆಟಲ್-ಗ್ಲಾಸ್ ಫಿನಿಶ್, 80W ವೇಗದ ಚಾರ್ಜಿಂಗ್ ಬೆಂಬಲಿಸುವ ದೈತ್ಯಾಕಾರದ 6,200mAh ಬ್ಯಾಟರಿ ಮತ್ತು ಶಕ್ತಿಶಾಲಿ ಮೀಡಿಯಾಟೆಕ್ ಡೈಮೆನ್ಸಿಟಿ 8450 ಚಿಪ್‌ಸೆಟ್‌ನೊಂದಿಗೆ, ಇದು ಎಲ್ಲರನ್ನೂ ಆಕರ್ಷಿಸುತ್ತದೆ. ವಿಶೇಷವಾಗಿ, ಇದು ನಾಲ್ಕು 50-ಮೆಗಾಪಿಕ್ಸೆಲ್ ಸೆನ್ಸರ್‌ಗಳನ್ನು (ಮುಖ್ಯ, ಅಲ್ಟ್ರಾ-ವೈಡ್, ಟೆಲಿಫೋಟೋ, ಮತ್ತು ಸೆಲ್ಫಿ) ಹೊಂದಿದ್ದು, ನಿಮ್ಮ ಫೋಟೋಗ್ರಫಿ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ!
ಒನ್‌ಪ್ಲಸ್ 13ಆರ್: ವೇಗ, ನಯವಾದ ಅನುಭವಕ್ಕೆ ಹೆಸರುವಾಸಿ!
ಒನ್‌ಪ್ಲಸ್‌ನಿಂದ ನೇರವಾಗಿ ನಿಮ್ಮ ಕೈಗೆ ಸಿಗಲಿದೆ ‘ಕ್ಲೀನ್ ಆಂಡ್ರಾಯ್ಡ್’ ಅನುಭವ! ಕೇವಲ 42,999 ರೂಪಾಯಿ ರಿಂದ ಆರಂಭವಾಗುವ ಒನ್‌ಪ್ಲಸ್ 13ಆರ್, ನಯವಾದ ಮತ್ತು ವೇಗದ ಕಾರ್ಯಕ್ಷಮತೆಯೊಂದಿಗೆ, ಬಹುತೇಕ ಫ್ಲಾಗ್‌ಶಿಪ್ ಅನುಭವ ನೀಡುತ್ತದೆ. ಇದರ 6.78-ಇಂಚಿನ AMOLED ಡಿಸ್‌ಪ್ಲೇ, 1.5K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, ಮತ್ತು ಬೆರಗುಗೊಳಿಸುವ 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಒಳಾಂಗಣ ಮತ್ತು ಹೊರಾಂಗಣದಲ್ಲೂ ಅದ್ಭುತವಾಗಿ ಗೋಚರಿಸುತ್ತದೆ.
ಕ್ವಾಲ್‌ಕಾಮ್ ಸ್ನಾಪ್‌ಡ್ರ್ಯಾಗನ್ 8 ಜೆನ್ 3 ಪ್ರೊಸೆಸರ್, 6,000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಮತ್ತು 80W ಚಾರ್ಜಿಂಗ್‌ನೊಂದಿಗೆ, ದೀರ್ಘಕಾಲದ ಬಳಕೆಗೆ ಸೂಕ್ತವಾಗಿದೆ. ನಾಲ್ಕು ವರ್ಷಗಳ ಓಎಸ್ ಅಪ್‌ಡೇಟ್ಸ್ ಮತ್ತು ಆರು ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳ ಭರವಸೆ ಇದರ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್!
ರಿಯಲ್‌ಮಿ ಜಿಟಿ 7: ಗೇಮಿಂಗ್ ಪವರ್‌ಹೌಸ್, ಬೆಲೆಯಲ್ಲಿ ಕ್ರಾಂತಿ!
ಶಕ್ತಿ ಮತ್ತು ವೇಗವೇ ನಿಮ್ಮ ಆದ್ಯತೆಯಾದರೆ, ರಿಯಲ್‌ಮಿ ಜಿಟಿ 7 ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ! 39,999 ರೂಪಾಯಿಯಿಂದ ಶುರುವಾಗುವ ಈ ಪೋನ್ 6.78-ಇಂಚಿನ AMOLED ಸ್ಕ್ರೀನ್, 1.5K ರೆಸಲ್ಯೂಶನ್ ಮತ್ತು ಅತಿ ಎತ್ತರದ 6,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ – ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಅತ್ಯಂತ ಪ್ರಕಾಶಮಾನವಾದ ಡಿಸ್‌ಪ್ಲೇ ಇದಾಗಿದೆ. ಹೊಸ ಡೈಮೆನ್ಸಿಟಿ 9400e ಪ್ರೊಸೆಸರ್, ಫ್ಲಾಗ್‌ಶಿಪ್ ಮಟ್ಟದ ಕಾರ್ಯಕ್ಷಮತೆ ನೀಡುತ್ತದೆ. ದೈತ್ಯ 7,000mAh ಬ್ಯಾಟರಿ ಜೊತೆ ಬಾಕ್ಸ್‌ನಲ್ಲಿ ಲಭ್ಯವಿರುವ 120W ವೇಗದ ಚಾರ್ಜರ್, ದಿನವಿಡೀ ನಿಮ್ಮ ಪೋನ್ ಚಾರ್ಜ್ ಇರುವಂತೆ ನೋಡಿಕೊಳ್ಳುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56: ದೀರ್ಘಕಾಲೀನ ಪ್ರದರ್ಶನಕ್ಕೆ ನಂಬಿಕೆ!
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56 ಸರಳತೆ, ವಿಶ್ವಾಸಾರ್ಹ ಸಾಫ್ಟ್‌ವೇರ್ ಮತ್ತು ದೀರ್ಘಕಾಲೀನ ಬೆಂಬಲಕ್ಕೆ ಒತ್ತು ನೀಡುತ್ತದೆ. ಇದರ 6.7-ಇಂಚಿನ ಸೂಪರ್ AMOLED ಸ್ಕ್ರೀನ್ 120Hz ರಿಫ್ರೆಶ್ ರೇಟ್ ಮತ್ತು 1,200 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಎಕ್ಸಿನೋಸ್ 1580 ಚಿಪ್‌ನಿಂದ ಚಾಲಿತವಾಗಿರುವ ಇದು, 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಉತ್ತಮ ಫೋಟೋಗಳನ್ನು ಸೆರೆಹಿಡಿಯುತ್ತದೆ.
ಸ್ಯಾಮ್‌ಸಂಗ್‌ನ ಸಾಫ್ಟ್‌ವೇರ್ ಭರವಸೆ – ಆರು ವರ್ಷಗಳ ಭದ್ರತಾ ಅಪ್‌ಡೇಟ್‌ಗಳು ಮತ್ತು ನಾಲ್ಕು ಆಂಡ್ರಾಯ್ಡ್ ಓಎಸ್ ಅಪ್‌ಗ್ರೇಡ್‌ಗಳು – ಇದನ್ನು 50,000 ರೂಪಾಯಿಗಿಂತ ಕಡಿಮೆ ಬೆಲೆಯ ಅತ್ಯಂತ ಭವಿಷ್ಯ-ನಿರೋಧಕ ಸಾಧನಗಳಲ್ಲಿ ಒಂದನ್ನಾಗಿ ಮಾಡಿದೆ. ಬೆಲೆ 41,999 ರೂಪಾಯಿಯಿಂದ ಆರಂಭವಾಗುತ್ತದೆ.