ನವದೆಹಲಿ: ಪಾಕಿಸ್ತಾನಿ ಸುದ್ದಿ ವಾಹಿನಿಗಳು ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ‘ಆಪರೇಷನ್ ಸಿಂದೂರ’ದ ಸಮಯದಲ್ಲಿ ವಿಧಿಸಲಾಗಿದ್ದ ನಿಷೇಧವನ್ನು ಹಿಂಪಡೆಯಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತೀಕಾರವೆಂಬಂತೆ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಪಾಕ್ ವಿರುದ್ಧ ಸೇಡಿನ ಕ್ರಮವಾಗಿ ಈ ಎಲ್ಲ ನಿಷೇಧದ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಈಗ ಪಾಕ್ ಸುದ್ದಿವಾಹಿನಗಳು ಮತ್ತು ಆ ದೇಶದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳು ಭಾರತದಲ್ಲಿ ಮತ್ತೆ ಗೋಚರಿಸುತ್ತಿದೆ. ಇದು ನಿರ್ಬಂಧಗಳನ್ನು ತೆರವುಗೊಳಿಸಿರುವ ಸುಳಿವನ್ನು ನೀಡಿದೆ. ಸಬಾ ಖಮರ್, ಮಾವ್ರಾ ಹೊಕೇನ್, ಅಹದ್ ರಾಜಾ ಮಿರ್, ಹನಿಯಾ ಅಮೀರ್ ಸೇರಿದಂತೆ ಹಲವು ಪಾಕಿಸ್ತಾನಿ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳು ಈಗ ಭಾರತದಲ್ಲಿ ಕಾಣಿಸುತ್ತಿವೆ.
ನಿಷೇಧ ತೆರವಿಗೆ ಕಾರಣವೇನು?
ಸರ್ಕಾರಿ ಮೂಲಗಳ ಪ್ರಕಾರ, ಈ ಹಿಂದೆ ನಿರ್ಬಂಧಿಸಲಾಗಿದ್ದ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಇತ್ತೀಚೆಗೆ ಪರಿಶೀಲನೆ ನಡೆಸಲಾಗಿದೆ. ಕೆಲವು ಖಾತೆಗಳು ದೀರ್ಘಕಾಲದವರೆಗೆ ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡದೇ ಇರುವುದರಿಂದ ಅಂತಹ ಖಾತೆಗಳನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಸುಮಾರು 14,000 ಖಾತೆಗಳು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್ನೂ ನಿಷೇಧದಲ್ಲಿವೆ, ಆದರೆ ಇಂತಹ ನಿಷೇಧಗಳು ಶಾಶ್ವತವಲ್ಲ ಎಂದು ಮೂಲಗಳು ತಿಳಿಸಿವೆ. ಖಾತೆಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಏಪ್ರಿಲ್ 22 ರ ಪಹಲ್ಗಾಮ್ ದಾಳಿಯ ನಂತರ ಭಾರತ ಸರ್ಕಾರವು ನಿಷೇಧಿಸಿದ್ದ ಹಲವು ಪಾಕಿಸ್ತಾನಿ ಸೆಲೆಬ್ರಿಟಿಗಳಾದ ಸಬಾ ಖಮರ್, ಮಾವ್ರಾ ಹೊಕೇನ್, ಅಹದ್ ರಾಜಾ ಮಿರ್, ಹನಿಯಾ ಅಮೀರ್, ಯಮ್ನಾ ಜೈದಿ ಮತ್ತು ಡ್ಯಾನಿಶ್ ತೈಮೂರ್ ಸೇರಿದಂತೆ ಅನೇಕರ ಇನ್‌ಸ್ಟಾಗ್ರಾಮ್ ಖಾತೆಗಳು ಬುಧವಾರದಿಂದ ಭಾರತದಲ್ಲಿ ಗೋಚರಿಸಲು ಪ್ರಾರಂಭಿಸಿವೆ. ಹಮ್ ಟಿವಿ, ಎಆರ್‌ಐ ಡಿಜಿಟಲ್ ಮತ್ತು ಹರ್‌ಪಲ್ ಜಿಯೋನಂತಹ ಪಾಕಿಸ್ತಾನಿ ಸುದ್ದಿ ಮಾಧ್ಯಮ ಸಂಸ್ಥೆಗಳು ನಡೆಸುವ ಹಲವು ಯೂಟ್ಯೂಬ್ ಚಾನೆಲ್‌ಗಳು ಕೂಡ ಮತ್ತೆ ಪ್ರಸಾರವಾಗುತ್ತಿವೆ.

ಕಾಶ್ಮೀರದ ಪಹಲ್ಗಾಮ್‌ನ ಬೈಸರಾನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತವು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿತ್ತು. ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್ ಮತ್ತು ಜಿಯೋ ನ್ಯೂಸ್ ಸೇರಿದಂತೆ ಹಲವು ಚಾನೆಲ್‌ಗಳು ಭಾರತದ ವಿರುದ್ಧ ಸುಳ್ಳು, ತಪ್ಪು ಮಾಹಿತಿ ಹರಡುತ್ತಿವೆ ಎಂದು ವರದಿಯಾಗಿತ್ತು.
ಪ್ರಚೋದನಕಾರಿ ಮತ್ತು ಕೋಮು-ಸೂಕ್ಷ್ಮ ವಿಷಯ, ಭಾರತ, ಸೇನೆ ಮತ್ತು ಅದರ ಭದ್ರತಾ ಸಂಸ್ಥೆಗಳ ವಿರುದ್ಧ ದಾರಿತಪ್ಪಿಸುವ ನಿರೂಪಣೆಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಈ ಯೂಟ್ಯೂಬ್ ಚಾನೆಲ್‌ಗಳನ್ನು ದೇಶದಲ್ಲಿ ಸ್ಟ್ರೀಮ್ ಮಾಡುವುದನ್ನು ನಿಷೇಧಿಸಲಾಗಿತ್ತು. ನಿಷೇಧಿತ ಚಾನೆಲ್‌ಗಳು ಭಾರತದಲ್ಲಿ 63 ದಶಲಕ್ಷ ಚಂದಾದಾರರನ್ನು ಹೊಂದಿದ್ದವು.
ನಿಷೇಧದ ನಂತರ, ಹಲವಾರು ಭಾರತೀಯ ಬಳಕೆದಾರರು ವಿಪಿಎನ್ ಸೇವೆಗಳ ಮೂಲಕ ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು.
ಪಾಕಿಸ್ತಾನಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ (AICWA) ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ ಈ ನಿರ್ಬಂಧ ತೆರವುಗೊಂಡಿರುವುದು ಗಮನಾರ್ಹ ಸಂಗತಿ. ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಗೌರವಿಸುವಂತೆ ಹಾಗೂ ಪಾಕ್ ಚಾನೆಲ್ ಗಳಿಗೆ ಶಾಶ್ವತ ನಿಷೇಧ ಹೇರುವಂತೆ ಆ ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. “ಪಾಕಿಸ್ತಾನವನ್ನು ಸಂಪೂರ್ಣವಾಗಿ ನಿರ್ಬಂಧಿಸುವುದರಿಂದ ನಮ್ಮ ಆರ್ಥಿಕತೆ ಅಥವಾ ಮನರಂಜನಾ ಉದ್ಯಮದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ” ಎಂದೂ ಅದರಲ್ಲಿ ಉಲ್ಲೇಖಿಸಲಾಗಿತ್ತು.