ಚಿತ್ರದುರ್ಗ: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಹಾಸನ, ತುಮಕೂರಿನಲ್ಲಿ ಈ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ. ಈ ವಿಷಯವಾಗಿ ಈಗ ಚಿತ್ರದುರ್ಗ ಡಿಎಚ್ ಓ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಆರೋಗ್ಯ ಇಲಾಖೆ DHO ಡಾ.ರೇಣುಪ್ರಸಾದ್ ಮಾತನಾಡಿ, ಮೇ ಮತ್ತು ಜೂನ್ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ 37 ಹೃದಯಾಘಾತ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ. ಈ ಪೈಕಿ 23 ಜನ ಗಂಡು,14 ಜನ ಮಹಿಳೆಯರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 21 ರಿಂದ 30 ವರ್ಷದೊಳಗಿನ ಓರ್ವ ವ್ಯಕ್ತಿ, 31 ರಂದ 40 ವರ್ಷದ ನಾಲ್ವರು, 41 ರಿಂದ 50 ವರ್ಷದೊಳಗಿನ ಐವರು, 51 ರಿಂದ 60 ವರ್ಷದೊಳಗಿನ 10 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
61-70 ವರ್ಷದ 9 ಜನ, 70 ವರ್ಷಕ್ಕೆ ಮೇಲ್ಪಟ್ಟು 10 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಹೃದಯ ರೋಗಕ್ಕೆ ಸಂಬಂಧಿಸಿದ 187 ಪ್ರಕರಣಗಳು ದಾಖಲಾಗಿದ್ದು, 37 ಪ್ರಕರಣಗಳು ಹೃದಯಾಘಾತದಿಂದ ಸಾವಾಗಿವೆ. ಇನ್ನುಳಿದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದಿದ್ದಾರೆ.



















