ಧಾರವಾಡ: ಟ್ರ್ಯಾಕ್ಟರ್ ಚಕ್ರದಲ್ಲಿ ಸಿಲುಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಟ್ರ್ಯಾಕ್ಟರ್ ಹಾಯ್ದು ಹೋಗಿದೆ. ಆದರೆ, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟ್ರ್ಯಾಕ್ಟರ್ ಹಾಗೂ ಗೂಡ್ಸ್ ವಾಹನಗಳ ಮಧ್ಯೆ ಸಣ್ಣ ಅಪಘಾತವಾಗಿತ್ತು. ಹೀಗಾಗಿ ಎರಡೂ ವಾಹನಗಳ ಚಾಲಕರ ಮಧ್ಯೆ ಗಲಾಟೆ ನಡೆದಿತ್ತು. ಮಾತಿನ ವಾಗ್ವಾದ ನಡೆದಿತ್ತು. ಗೂಡ್ಸ್ ವಾಹನ ಚಾಲಕ, ಟ್ರ್ಯಾಕ್ಟರ್ ಹತ್ತಿ ವಾಗ್ವಾದ ನಡೆಸುತ್ತಿದ್ದ. ಆಗ ಟ್ರ್ಯಾಕ್ಟರ್ ಚಾಲಕ ಗಾಡಿ ಚಲಾಯಿಸಿದ್ದಾನೆ. ಆಗ ಇಬ್ಬರು ಆಯ ತಪ್ಪಿ ಬಿದ್ದಿದ್ದು ಟ್ರ್ಯಾಕ್ಟರ್ ಚಕ್ರದ ಕೆಳಗೆ ಸಿಲುಕಿದ್ದಾರೆ. ಇಬ್ಬರ ಮೇಲೂ ಟ್ರ್ಯಾಕ್ಟರ್ ಚಕ್ರ ಹತ್ತಿ ಇಳಿದಿದೆ. ಆದರೂ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕಲಘಟಗಿ ಮತ್ತು ಬೆಲವಂತರ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.