ಲಂಡನ್: ಕ್ರಿಕೆಟ್ ಆಸ್ಟ್ರೇಲಿಯಾ ಜೂನ್ 19 ರಂದು ನಡೆಸಲಿರುವ ಪ್ರತಿಷ್ಠಿತ ಬಿಗ್ ಬ್ಯಾಷ್ ಲೀಗ್ (BBL) ಡ್ರಾಫ್ಟ್ಗೆ ವಿಶ್ವದಾದ್ಯಂತ 600ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ನ ದಿಗ್ಗಜ ವೇಗಿ ಜೇಮ್ಸ್ ಆಂಡರ್ಸನ್ ಅವರ ಅಚ್ಚರಿಯ ಸೇರ್ಪಡೆ ಮುಖ್ಯ ಆಕರ್ಷಣೆಯಾಗಿದೆ. ಇದರ ಜೊತೆಗೆ, ಭಾರತದಿಂದ ಏಕೈಕ ಆಟಗಾರನಾಗಿ ಅನುಭವಿ ವೇಗಿ ಸಿದ್ಧಾರ್ಥ್ ಕೌಲ್ ಮಾತ್ರ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿರುವ ಜೇಮ್ಸ್ ಆಂಡರ್ಸನ್, 11 ವರ್ಷಗಳ ಸುದೀರ್ಘ ಅಂತರದ ನಂತರ ಇತ್ತೀಚೆಗೆ ಟಿ20 ಕ್ರಿಕೆಟ್ಗೆ ಮರಳಿದ್ದರು. ವಿಟಾಲಿಟಿ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಲಂಕಾಷೈರ್ ಪರ ಆಡಿದ ಅವರು, ತಮ್ಮ ಕಮ್ಬ್ಯಾಕ್ ಪಂದ್ಯದಲ್ಲೇ ಡುರ್ಹ್ಯಾಮ್ ವಿರುದ್ಧ 3 ವಿಕೆಟ್ಗಳನ್ನು ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 4 ಇನ್ನಿಂಗ್ಸ್ಗಳಲ್ಲಿ ಒಟ್ಟು 9 ವಿಕೆಟ್ ಕಬಳಿಸಿ, ಟಿ20 ಕ್ರಿಕೆಟ್ನಲ್ಲೂ ತಾವು ಇನ್ನೂ ಮಾರಕ ಬೌಲರ್ ಎಂಬುದನ್ನು ತೋರಿಸಿದ್ದಾರೆ.
ಬಿಬಿಎಲ್ ಡ್ರಾಫ್ಟ್ನಲ್ಲಿ ಆಂಡರ್ಸನ್ ಅವರನ್ನು ಯಾವುದೇ ತಂಡ ಖರೀದಿಸಿದರೆ, ಅವರು 2025ರ BBL ಟೂರ್ನಿಯಲ್ಲಿ ಆಡುವ ಅತ್ಯಂತ ಹಿರಿಯ ಆಟಗಾರ ಎಂಬ ವಿಶಿಷ್ಟ ದಾಖಲೆ ಬರೆಯಲಿದ್ದಾರೆ. ಆಸ್ಟ್ರೇಲಿಯಾದ ಬ್ರಾಡ್ ಹಾಗ್ ನಂತರ, BBL ಇತಿಹಾಸದಲ್ಲಿ ಎರಡನೇ ಅತ್ಯಂತ ಹಿರಿಯ ಆಟಗಾರರಾಗಲಿದ್ದಾರೆ. ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆಂಡರ್ಸನ್ಗೆ ಅವಕಾಶ ಸಿಗದಿದ್ದರೂ, BBL ನಲ್ಲಿ ಅವರಿಗೆ ಬೇಡಿಕೆ ಬರಬಹುದೇ ಎಂದು ಕಾದು ನೋಡಬೇಕು.
ಭಾರತದಿಂದ ಕೌಲ್ ಏಕೈಕ ಭರವಸೆ
ಅಂತರರಾಷ್ಟ್ರೀಯ ಲೀಗ್ಗಳಲ್ಲಿ ಭಾರತೀಯ ಪುರುಷ ಆಟಗಾರರ ಭಾಗವಹಿಸುವಿಕೆಗೆ ನಿರ್ಬಂಧಗಳಿದ್ದರೂ, ಸಿದ್ಧಾರ್ಥ್ ಕೌಲ್ BBL ಡ್ರಾಫ್ಟ್ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಪ್ರಮುಖವಾಗಿ, ಇಂಗ್ಲೆಂಡ್ನಿಂದ ಅತಿ ಹೆಚ್ಚು (178) ಆಟಗಾರರು ನೋಂದಾಯಿಸಿದ್ದರೆ, ಪಾಕಿಸ್ತಾನದಿಂದ 74, ವೆಸ್ಟ್ ಇಂಡೀಸ್ನಿಂದ 42, ಮತ್ತು ಶ್ರೀಲಂಕಾದಿಂದ 13 ಆಟಗಾರರು ಈ ಡ್ರಾಫ್ಟ್ನ ಭಾಗವಾಗಿದ್ದಾರೆ.
ಮಹಿಳಾ ಬಿಬಿಎಲ್ ಭಾರತೀಯ ಸ್ಪರ್ಧೆ
ಪುರುಷರ ಲೀಗ್ ಜೊತೆಗೆ, ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ಡ್ರಾಫ್ಟ್ಗೂ ಭಾರತದ ಮೂವರು ಪ್ರಮುಖ ಆಟಗಾರ್ತಿಯರಾದ ಶಿಖಾ ಪಾಂಡೆ, ಯಾಸ್ತಿಕಾ ಭಾಟಿಯಾ ಮತ್ತು ಜೆಮಿಮಾ ರೊಡ್ರಿಗಸ್ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಆಟಗಾರ್ತಿಯರು WBBL ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಬಿಬಿಎಲ್ ಮತ್ತು ಡಬ್ಲ್ಯುಬಿಎಲ್ ಎರಡರಲ್ಲೂ, ಹೀಟ್ ಮತ್ತು ಸಿಕ್ಸರ್ಸ್ ತಂಡಗಳು ಡ್ರಾಫ್ಟ್ನಲ್ಲಿ ಮೊದಲ ಆಯ್ಕೆಗಳನ್ನು ಹೊಂದಿವೆ. ಪ್ರತಿ ಡ್ರಾಫ್ಟ್ ನಾಲ್ಕು ಸುತ್ತುಗಳನ್ನು ಒಳಗೊಂಡಿದ್ದು, ತಂಡಗಳು ತಮ್ಮ ಆಯ್ಕೆಗಳನ್ನು ಮಾಡಿಕೊಳ್ಳಲಿವೆ. ಜೂನ್ 19 ರಂದು ನಡೆಯುವ ಡ್ರಾಫ್ಟ್ನಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದನ್ನು ತಿಳಿಯಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.