ಬೆಂಗಳೂರು: ಉಂಡ ಮನೆಗೆ ದ್ರೋಹ ಬಗೆದು ಚಿನ್ನಾಭರಣ ದೋಚಿರುವ ಹಲವಾರು ಘಟನೆಗಳು ಇತ್ತೀಚೆಗೆ ಬೆಳಕಿಗೆ ಬರುತ್ತಲೇ ಇವೆ. ಈಗ ಮತ್ತೆ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ.

ಹೆಚ್ ಎಎಲ್ ನ ಶಾಸ್ತ್ರೀ ನಗರದಲ್ಲಿ ಉದ್ಯಮಿ ರಮೇಶ್ ಬಾಬು ಕಟುಂಬ ವಾಸವಿತ್ತು. ಮನೆ ಸೆಕ್ಯೂರಿಟಿ ಕೆಲಸಕ್ಕೆಂದು ಮೂರು ತಿಂಗಳ ಹಿಂದೆ ನೇಪಾಳ ಮೂಲದ ದಂಪತಿಯನ್ನ ನೇಮಿಸಲಾಗಿತ್ತು. ಈ ಖತರ್ನಾಕ್ ದಂಪತಿ ತುಂಬಾ ಚೆನ್ನಾಗಿ ಮನೆಯ ಮಾಲೀಕರ ನಂಬಿಕೆ ಗಳಿಸಿದ್ದರು. ಆ ನಂಬಿಕೆಯ ಮೇಲೆಯೆ ರಾಜ್ ಹಾಗೂ ದೀಪಾಳನ್ನು ನಂಬಿ ತನ್ನ ಕುಟುಂಬಸ್ಥರ ಜೊತೆ ರಮೇಶ್ ಬಾಬು ತಿರುಪತಿಗೆ ತೆರಳಿದ್ದರು.
ಪ್ರತಿದಿನ ಉದ್ಯಮಿ ರಮೇಶ್ ಬಾಬು ಸಿಸಿಟಿವಿ ಮೂಲಕ ಮನೆಯನ್ನು ಮೊಬೈಲ್ ನಲ್ಲಿ ನೋಡುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಬೆಳಗ್ಗೆ ಮನೆಯ ಸಿಸಿಟಿವಿ ಆಫ್ ಆಗಿದೆ. ಈ ವೇಳೆ ತನ್ನ ಸ್ನೇಹಿತರಿಗೆ ಮನೆ ಬಳಿ ಹೋಗಲು ರಮೇಶ್ ಬಾಬು ಹೇಳಿದ್ದಾರೆ. ಆಗ ಸ್ನೇಹಿತ ಮನೆ ಬಳಿ ಹೋದಾಗ ಮನೆಯಲ್ಲಿ ಕಳ್ಳತನ ಆಗಿರುವುದು ತಿಳಿದು ಬಂದಿದೆ.
ಮನೆಯಲ್ಲಿದ್ದ ಎರಡು ಕೆಜಿ ಚಿನ್ನಾಭರಣ, 10 ಲಕ್ಷ ನಗದು ಹಾಗೂ ರಮೇಶ್ ಬಾಬು ಆತ್ಮರಕ್ಷಣೆಗೆ ಇಟ್ಟುಕೊಂಡಿದ್ದ ಗನ್ ಕೂಡ ಕದ್ದು ರಾಜ್ ಹಾಗೂ ದೀಪಾ ಎಸ್ಕೆಪ್ ಆಗಿದ್ದಾರೆ. ಆರೋಪಿಗಳ ವಿರುದ್ಧ ಈಗ ಎಫ್ ಐಆರ್ ದಾಖಲಾಗಿದ್ದು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.