ಬೆಳಗಾವಿ: ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಖಾನಪೂರ ತಾಲೂಕಿನ ಕುಸಮಳಿ ಗ್ರಾಮದ ಬಳಿ ಅಡ್ಡಲಾಗಿ ಇರೋ ತಾತ್ಕಾಲಿಕ ಸೇತುವೆಯನ್ನು ನಿಷೇಧಿಸಲಾಗಿದೆ. ಕೆಲ ದಿನಗಳಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಗೆ ಮಲಪ್ರಭಾ ನದಿಗೆ ಒಳಹರಿವು ಹೆಚ್ಚಳವಾಗಿದೆ.
ಇದರಿಂದ ಯಾವುದೇ ತೊಂದರೆಯಾಗಬಾರದೆಂದು ಮುಂಜಾಗ್ರತಾ ಕ್ರಮ ವಹಿಸಿ ಬೆಳಗಾವಿಯಿಂದ ಜಾಂಬೋಟಿ ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಷೇಧಿಸಿ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿದೆ.
ಹಳೆ ಸೇತುವೆ ಕೆಡವಿ ಹೊಸದಾದ ಸೇತುವೆ ನಿರ್ಮಾಣದ ಕಾಮಗಾರಿ ಚಾಲ್ತಿಯಲ್ಲಿರುವುದರಿಂದ ಮಳೆಗಾಲ ಮುಗಿಯುವವರೆಗೂ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ಸಂಚಾರ ಬಂದ್ ಆಗಿರುವ ಹಿನ್ನೆಲೆ ಬೆಳಗಾವಿ ಖಾನಾಪುರ ರಾಮನಗರ ಮಾರ್ಗವಾಗಿ ಗೋವಾಕ್ಕೆ ಹೋಗ್ತಿರುವ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.