ನವದೆಹಲಿ: ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವು ಭಾಗವಹಿಸುವುದು (Hockey Teams : ಭಾರತಕ್ಕೆ ನೋ ಎಂಟ್ರಿ; ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕ್ ತಂಡಕ್ಕಿಲ್ಲ ಚಾನ್ಸ್) ಅನುಮಾನವೆನಿಸಿದೆ. ಈ ಪಂದ್ಯಾವಳಿಯು ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿದೆ.
ಈ ಟೂರ್ನಿಯಲ್ಲಿ ಆತಿಥೇಯ ಭಾರತ, ಪಾಕಿಸ್ತಾನ, ಜಪಾನ್, ಕೊರಿಯಾ, ಚೀನಾ, ಮಲೇಷ್ಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಭಾಗವಹಿಸಬೇಕಿದೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವುದರಿಂದ ಪಾಕಿಸ್ತಾನ ತಂಡಕ್ಕೆ ಭಾರತ ವೀಸಾ ನೀಡುವುದು ಕಷ್ಟಸಾಧ್ಯವೆಂದು ಹೇಳಲಾಗುತ್ತಿದೆ. ಮುಂದಿನ ವರ್ಷ ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತಾ ಪಂದ್ಯಾವಳಿಯಾಗಿ ಈ ಟೂರ್ನಿ ಮಹತ್ವ ಪಡೆದಿದೆ.
ಈ ಕುರಿತು ಪಿಟಿಐಗೆ ಮಾಹಿತಿ ನೀಡಿದ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್, “ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿ ಮತ್ತು ನಂತರ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಂತರ ನಾವು ಈಗಲೇ ಏನನ್ನೂ ಊಹಿಸಲು ಸಾಧ್ಯವಿಲ್ಲ. ಪಂದ್ಯಾವಳಿಗೆ ಇನ್ನೂ ಮೂರು ತಿಂಗಳುಗಳಿವೆ. ಈ ವಿಷಯದಲ್ಲಿ ನಮ್ಮ ಸರ್ಕಾರವು ನಮಗೆ ನೀಡುವ ಸೂಚನೆಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ” ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರವು ಎಲ್ಲಾ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತ್ತು ಮತ್ತು ಅವರ ವೀಸಾಗಳನ್ನು ರದ್ದುಗೊಳಿಸಿತ್ತು. ಹೀಗಾಗಿ ಪಾಕಿಸ್ತಾನ ಹಾಕಿ ತಂಡಕ್ಕೆ ಭಾರತ ವೀಸಾ ನೀಡುವುದು ಅನುಮಾನವೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೆಟ್ಟ ಸಾಹಸಕ್ಕೆ ಕೈ ಹಾಕಿದ ಪಾಕಿಸ್ತಾನ
ಫೆಡರೇಶನ್‌ನ ಮೂಲವೊಂದು ಪಿಟಿಐಗೆ ತಿಳಿಸಿದ ಪ್ರಕಾರ, “ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಲು ಅನುಮತಿ ಪಡೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳದಿದ್ದರೆ, ಆ ಸಮಯದಲ್ಲಿ ಸರ್ಕಾರದ ನಿಲುವನ್ನು ಅವಲಂಬಿಸಿರುತ್ತದೆ.”
ಪಾಕಿಸ್ತಾನ ತಂಡಕ್ಕೆ ಭಾರತಕ್ಕೆ ಪ್ರಯಾಣಿಸಲು ಅನುಮತಿ ಸಿಗದಿದ್ದರೆ, ಪಂದ್ಯಾವಳಿಯನ್ನು ಏಳು ತಂಡಗಳನ್ನಾಗಿ ಮುಂದುವರೆಸುವುದು ಅಥವಾ ಖಾಲಿ ಉಳಿಯುವ ಸ್ಥಾನಕ್ಕೆ ಬೇರೆ ತಂಡವನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ಏಷ್ಯನ್ ಹಾಕಿ ಫೆಡರೇಶನ್‌ನ ನಿರ್ಧಾರವಾಗಿರುತ್ತದೆ.