ನವದೆಹಲಿ: ಭಾರತ ಹಾಗೂ ರಷ್ಯಾ ಸಹಯೋಗದಲ್ಲಿ ತಯಾರಿಸುವ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಗಳ ಮೂಲಕ ಪಾಕಿಸ್ತಾನದ 11 ವಾಯುನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಐದು ದಿನಗಳವರೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಬ್ರಹ್ಮೋಸ್ ಕ್ಷಿಪಣಿಗಳ ಮೂಲಕ ಪಾಕಿಸ್ತಾನದ 11 ವಾಯುನೆಲೆಗಳನ್ನು ಪುಡಿಗಟ್ಟಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಬ್ರಹ್ಮೋಸ್ ಕ್ಷಿಪಣಿಗಳಿಗೆ ಹೆದರಿಯೇ ಪಾಕಿಸ್ತಾನವು ಕದನವಿರಾಮಕ್ಕಾಗಿ ಅಮೆರಿಕದ ಪಾದಗಳಿಗೆ ಎರಗಿದೆ ಎಂದು ತಿಳಿದುಬಂದಿದೆ.
11 ವಾಯುನೆಲೆ ಯಾವವು?
- ರಫೀಕಿ ಏರ್ ಬೇಸ್
- ನೂರ್ ಖಾನ್ ಏರ್ ಬೇಸ್
- ಸುಕ್ಕೂರ್ ಏರ್ ಬೇಸ್
- ರಹಿಮ್ಯಾರ್ ಖಾನ್ ಏರ್ ಬೇಸ್
- ಚುನಿಯನ್ ಏರ್ ಬೇಸ್
- ಸಿಯಾಲ್ ಕೋಟ್ ಏರ್ ಬೇಸ್
- ಸರ್ಗೋಧಾ ಏರ್ ಬೇಸ್
- ಜಕೋಕಾಬಾದ್ ಏರ್ ಬೇಸ್
- ಪಸ್ರೂರ್ ಏರ್ ಬೇಸ್
- ಸ್ಕರ್ದು ಏರ್ ಬೇಸ್
- ಮುರಿದ್ ಏರ್ ಬೇಸ್
ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಗಳಾಗಿದ್ದು, ಯುದ್ಧವಿಮಾನ, ಸಮರನೌಕೆಗಳ ಮೂಲಕವೂ ಉಡಾವಣೆ ಮಾಡಬಹುದಾಗಿದೆ. ಇವು ನೂರಾರು ಕಿಲೋಮೀಟರ್ ದೂರದಲ್ಲಿರುವ ನೆಲೆಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ. ಹಾಗಾಗಿಯೇ, ಭಾರತವು ಆಪರೇಷನ್ ಸಿಂಧೂರ ಕೈಗೊಳ್ಳುವಾಗ ರಾಫೆಲ್ ಯುದ್ಧವಿಮಾನಗಳ ಜತೆಗೆ ಬ್ರಹ್ಮೋಸ್ ಕ್ಷಿಪಣಿಗಳನ್ನೂ ಬಳಸಿದೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 22ರ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ಪ್ರತಿದಾಳಿಯ ವೇಳೆ ಹಲವು ವಾಯುನೆಲೆಗಳು ಧ್ವಂಸಗೊಂಡಿವೆ ಎಂದು ಖುದ್ದು ಪಾಕಿಸ್ತಾನ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ. ಇದರ ಮಧ್ಯೆಯೇ, ಉತ್ತರ ಪ್ರದೇಶದಲ್ಲಿ ವರ್ಷಕ್ಕೆ 80-100 ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದಿಸುವ ಬ್ರಹ್ಮೋಸ್ ತಯಾರಿಕಾ ಕಾರ್ಖಾನೆಗೆ ಕೇಂದ್ರ ಸರ್ಕಾರ ಭಾನುವಾರ ಚಾಲನೆ ನೀಡಿದೆ.



















