ನವದೆಹಲಿ: ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪಾಕ್ ಭಾರತದ ಮೇಲೆ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಭಾರತ ದಿಟ್ಟ ಉತ್ತರ ನೀಡಿದೆ.
ಭಾರತೀಯ ಸೇನೆ ಲಾಹೋರ್ (Lahore) ಮೇಲೆ ಮಿಸೈಲ್ ಗಳ ಸುರಿಮಳೆ ಗರೆದಿದೆ. ಈ ಮೂಲಕ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್ ಮತ್ತು ಅಲ್ಲಿನ ಜನತೆ ತತ್ತರಿಸಿದೆ. ಆದರೂ ಸುಮ್ಮನಾಗದ ಪಾಕಿಸ್ತಾನ, ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸುತ್ತಲೇ ಇದೆ.
ಜಮ್ಮುವಿನಲ್ಲಿ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಭಾರತೀಯ ಸೇನೆ ಎಲ್ಲಾ ದಾಳಿ ವಿಫಲಗೊಳಿಸಿದೆ.
ಲೈನ್ ಆಫ್ ಕಂಟ್ರೋಲ್ ಬಳಿ ಉದ್ವಿಗ್ನತೆ ಹೆಚ್ಚಾಗಿದೆ. ಜಮ್ಮುವಿನ ಪೂಂಚ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದೆ.
 
                                 
			 
			
 
                                 
                                


















