ದಾವಣಗೆರೆ : ಇತ್ತಿಚಿನ ದಿನಗಳಲ್ಲಿ ಪೋಕ್ಸೊ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದೇ ರೀತಿ ರಾಷ್ಟ್ರೀಯ ಅಂಕಿ ಅಂಶಗಳಿಗಿಂತ ದಾವಣಗೆರೆ ಜಿಲ್ಲೆಯ್ಲಲೇ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಅರ್ಚನಾ ಮಜುಂದಾರ್ ಹೇಳಿದ್ದಾರೆ.
ತಾವರೆಕೆರೆ ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದ್ದಾರೆ. ತಾವರೆಕೆರೆ ಗ್ರಾಮದಲ್ಲಿ ಮಸೀದಿಯ ಕಮಿಟಿಯವರು ಪೈಪ್, ದೊಣ್ಣೆ ಹಿಡಿದು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಈ ಹಲ್ಲೆ ಖಂಡನೀಯ. ಓರ್ವ ಮಹಿಳೆ ಮೇಲೆ ಹದಿನೈದು ಜನರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಇದನ್ನು ನೋಡಿದರೆ ನಮ್ಮ ಸಮಾಜ ಎಲ್ಲಿಗೆ ತಲುಪುತ್ತಿದೆ ಎಂದು ಭಯವಾಗುತ್ತಿದೆ ಎಂದಿದ್ದಾರೆ.
ಇಷ್ಟೆಲ್ಲಾ ಆಗಲು ಹಲ್ಲೆಗೆ ಒಳಗಾದ ಮಹಿಳೆಯ ಪತಿಯೇ ಕಾರಣ. ಆತ ತಲೆ ಮರೆಸಿಕೊಂಡಿದ್ದಾನೆ. ಪೋಲಿಸರು ಆದಷ್ಟು ಬೇಗ ಆತನನ್ನು ಬಂಧಿಸಬೇಕು. ನಾನು ಕೂಡ ಘಟನೆಯ ವಿಡಿಯೋ ನೋಡಿದ್ದೇನೆ. ವೀಡಿಯೋ ನೋಡಿ ತುಂಬಾ ನೋವಾಗಿದೆ. ನಾನು ಕೂಡ ಗ್ರಾಮಕ್ಕೆ ಭೇಟಿ ಕೊಟ್ಟು, ಸ್ಥಳೀಯ ಮಹಿಳೆಯರನ್ನು ಮಾತನಾಡಿಸಿದ್ದೇನೆ. ಮಹಿಳೆಯರು ಘಟನೆ ಬಗ್ಗೆ ವಿವರಿಸಿದ್ದಾರೆ. ಈಗಾಗಲೇ ಸುಮೋಟೊ ಕೇಸ್ ದಾಖಲಿಸಿ ಎಲ್ಲಾ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆದಷ್ಟು ಬೇಗ ಮಹಿಳೆಯ ಪತಿಯನ್ನು ಹುಡುಕುತ್ತೆವೆಂದು ಭರವಸೆ ನೀಡಿದ್ದಾರೆ.