ಬೆಂಗಳೂರು ಗ್ರಾಮಾಂತರ: ಲಕ್ಷಾಂತರ ರೂ. ಖರ್ಚು ಮಾಡಿ ಕಷ್ಟ ಪಟ್ಟು ಬೆಳೆದಿದ್ದ ಹಾಗಲಕಾಯಿ ಬೆಳೆ ಮೇಲೆ ದುಷ್ಕರ್ಮಿಗಳ ವಕ್ರ ದೃಷ್ಟಿ ಬಿದ್ದಿದ್ದು, ಬೆಳೆ ನಾಶಪಡಿಸಿರುವ ಘಟನೆ ನಡೆದಿದೆ.
ಕೈಗೆ ಬಂದಿದ್ದ ಬೆಳೆ ನಾಶವಾಗಿದ್ದರಿಂದಾಗಿ ರೈತ ಕಂಗಾಲಾಗಿದ್ದಾರೆ. ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಡ ರಾತ್ರಿ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಗ್ರಾಮದ ಮುರಳಿ ಎಂಬುವವರಿಗೆ ಸೇರಿದ್ದ ಹಾಗಲಕಾಯಿ ಬೆಳೆಯನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಇತ್ತೀಚೆಗಷ್ಟೇ 10 ಲಕ್ಷಕ್ಕೂ ಅಧಿಕ ರೂ. ಬಂಡವಾಳ ಹೂಡಿ ರೈತ ಮುರುಳಿ ಬೆಳೆದಿದ್ದರು. ಮೂರು ಎಕರೆ ಪ್ರದೇಶದಲ್ಲಿ ಹಾಗಲಕಾಯಿ ಬೆಳೆದಿದ್ದರು. ಆದರೆ, ಕಿಡಿಗೇಡಿಗಳು ನಾಶ ಮಾಡಿದ್ದು, ಅವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕೆಂದು ರೈತ ಆಗ್ರಹಿಸಿದ್ದಾರೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.