ದೊಡ್ಡದೊಂದು ಯಶಸ್ಸಿಗೆ ಬಾಲಿವುಡ್ ಕಳೆದ 2 ವರ್ಷಗಳಿಂದ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ದಕ್ಷಿಣದ ಸಿನಿಮಾಗಳು ಮಾಡಿದ ಮೋಡಿಯನ್ನು ಇತ್ತೀಚೆಗೆ ಯಾವ ದೊಡ್ಡ ಬಾಲಿವುಡ್ ಸ್ಟಾರ್ ಸಿನಿಮಾಗಳು ಮಾಡಿಲ್ಲ. ಹೀಗಾಗಿ ಹಿಂದಿ ಚಿತ್ರ ಜಗತ್ತಿಗೀಗ ದೊಡ್ಡ ಮಟ್ಟದ ಯಶಸ್ಸೊಂದು ಅನಿವಾರ್ಯವಾಗಿದೆ.
ಅದರಲ್ಲೂ ಬಾಲಿವುಡ್ ನ ಅನಭಿಷಕ್ತ ಸಾಮ್ರಾಟರಾದ ಖಾನ್ ಗಳಿಗೆ ಇದು ಅಳಿವು ಉಳಿವಿನ ಸಮಯವಾಗಿದೆ. ಹೀಗಾಗಿಯೇ ಮಹಾಕಾವ್ಯಗಳ ಹಿಂದೆ ಹಿಂದಿ ಸಿನಿ ಜಗತ್ತು ಬಿದ್ದಿದೆ. ಈಗಾಗಲೇ ರಣಬೀರ್, ಸಾಯಿ ಪಲ್ಲವಿ, ಯಶ್ ಕಾಂಬಿನೇಷನ್ ನಲ್ಲಿ ರಾಮಾಯಣ ಸೆಟ್ಟೇರಿದೆ. ಇದರ ಬೆನ್ನಲ್ಲೇ ಇದೀಗ ಮಹಾಭಾರತಕ್ಕೂ ಕಾಲ ಕೂಡಿ ಬರುತ್ತಿದೆ.
ಮಹಾಭಾರತ ದೃಶ್ಯ ಕಾವ್ಯಕ್ಕೆ ವೇದಿಕೆ ಸಜ್ಜು
ಒಂದು ಕಡೆ ಜವಾನ್ ಬಳಿಕ ಶಾರುಖ್ ಗೆ ಇಲ್ಲಿಯವರೆಗೂ ಒಂದೊಳ್ಳೆ ಕತೆ ಸಿಕ್ಕಿಲ್ಲ. ಸಲ್ಮಾನ್ ರ ಸಿಕಂದರ್ ಅವರದ್ದೇ ಪ್ಲ್ಯಾಪ್ ದಾಖಲೆಯನ್ನು ಮೆಟ್ಟಿ ನಿಂತಿದೆ. ಇತ್ತ ಅಮೀರ್ ಖಾನ್ ಸಿತಾರೆ ಜಮೀನ್ ಪರ ಅನ್ನೋ ಸಿನಿಮಾ ಮಾಡಿದ್ರೂ ಅದರ ಮೇಲೆ ಅವರಿಗೇ ನಂಬಿಕೆ ಇದ್ದಂತಿಲ್ಲ. ಹೀಗಾಗಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಇದೀಗ ಮಹಾಭಾರತವನ್ನು ಸಿನಿಮಾ ಆಗಿಸಲು ಹೊರಟಿದ್ದಾರೆ. ಅಷ್ಟೇ ಅಲ್ಲಾ ಖುದ್ದು ನಿರ್ದೇಶನ ಮಾಡುವ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ.
ಏಕಕಾಲಕ್ಕೆ ಹಲವು ಭಾಗಗಳಲ್ಲಿ ಮಹಾಭಾರತ ಚಿತ್ರೀಕರಣ
ಮಹಾಭಾರತ ಹೇಳಿ ಕೇಳಿ ಮಹಾಕಾವ್ಯ. ಒಂದೇ ಭಾಗದಲ್ಲಿ ಎಲ್ಲವನ್ನೂ ಹೇಳುವುದು ಅಸಾಧ್ಯ. ಹೀಗಾಗಿ ಸಿನಿಮಾವನ್ನು ಹಲವು ಭಾಗಗಳಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ವಿಶೇಷ ಎನ್ನುವಂತೆ ಖುದ್ದು ಅಮೀರ್ ಸೇರಿದಂತೆ ಮೂರ್ನಾಲ್ಕು ನಿರ್ದೇಶಕರು ಏಕಕಾಲಕ್ಕೆ ಚಿತ್ರ ನಿರ್ದೇಶಿಸುವ ಚಿಂತನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೀರ್ ಖಾನ್, ಮಹಾಭಾರತ ತನ್ನ ಕನಸಿನ ಯೋಜನೆ, ಈ ವರ್ಷಾಂತ್ಯಕ್ಕೆ ಕತೆ ಕೆಲಸ ಆರಂಭವಾಗಲಿದ್ದು, ಮುಂದಿನ 2 ರಿಂದ 3 ವರ್ಷದಲ್ಲಿ ಎಲ್ಲವೂ ಕಾರ್ಯ ರೂಪಕ್ಕೆ ಬರುತ್ತೆ ಎಂದಿದ್ದಾರೆ. ಇನ್ನು ಆಧುನಿಕ ಮಹಾಭಾರತದಲ್ಲಿ ಅಮೀರ್ ಯಾವ ಪಾತ್ರ ಮಾಡುತ್ತಾರೆ. ಬಿಗ್ ಬಿ ಅಮಿತಾಬ್, ಅನಿಲ್ ಕಪೂರ್, ಅಜಯ್ ದೇವಗನ್ ಇರ್ತಾರಾ. ಇಲ್ಲಾ ಶಾರುಖ್, ಸಲ್ಮಾನ್ ಗೂ ಪಾತ್ರ ನಿಗದಿಯಾಗಿದೆಯಾ ಅನ್ನೋದಿನ್ನೂ ನಿಗೂಢವಾಗಿದೆ.