ಚಿಕ್ಕೋಡಿ: ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ರಾಜ್ಯದಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಯೋರ್ವ ಪಾಸ್ ಮಾಡುವುದಕ್ಕಾಗಿ 500 ರೂ. ಹಣವನ್ನು ಉತ್ತರ ಪತ್ರಿಕೆಯಲ್ಲಿ ಇಟ್ಟಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿಯ (Belagavi) ಚಿಕ್ಕೋಡಿ (Chikkodi) ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಈ ರೀತಿಯ ವಿಚಿತ್ರ ಉತ್ತರ ಪತ್ರಿಕೆ ಲಭ್ಯವಾಗಿದೆ. ಹಲವು ಬಗೆಯ ಉತ್ತರ ಪತ್ರಿಕೆಗಳು ಮೌಲ್ಯಮಾಪನದ ವೇಳೆ ಸಿಕ್ಕಿದ್ದು, ಶಿಕ್ಷಕರು ತಲೆ ಚಚ್ಚಿಕೊಳ್ಳುವಂತಾಗಿದೆ. ನಿಮ್ಮ ಕಾಲ್ ಬೀಳ್ತೀನಿರಿ. ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ (Love) ಮಾಡುತ್ತೇನೆ ಅಂದಿದ್ದಾಳೆ. ನನ್ನ ಲವ್ ನಿಮ್ಮ ಕೈಯಲ್ಲಿದೆ. ಈ 500 ರೂ. ಹಣದಲ್ಲಿ ಚಹಾ ಕುಡಿರಿ ಸರ್ ಎಂದು 500 ರೂ. ನೋಟು ಇಟ್ಟು ವಿದ್ಯಾರ್ಥಿಯೊಬ್ಬ ವಿಚಿತ್ರ ಬೇಡಿಕೆಯಿಟ್ಟಿರುವ ಬರವಣಿಗೆ ಪತ್ತೆಯಾಗಿದೆ.
ಪ್ಲೀಸ್ ಮಿಸ್, ಸರ್ ನನ್ನನ್ನು ಪಾಸ್ ಮಾಡಿ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ ಎಂದು ಮತ್ತೊಂದು ಉತ್ತರ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.