ಬೆಂಗಳೂರು: ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಅಧೀನ ಸಂಸ್ಥೆಯಾಗಿರುವ ನ್ಯಾಷನಲ್ ಶುಗರ್ ಇನ್ ಸ್ಟಿಟ್ಯೂಟ್-ಕಾನ್ಪುರದಲ್ಲಿ ಪ್ರೊಫೆಸರ್ ಹಾಗೂ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
‘ಎ’ ವೃಂದದ ಗೆಜೆಟೆಡ್, ಸಚಿವೇತರ ಹುದ್ದೆಗಳಾದ ಹಂತ-13 ಮತ್ತು ಹಂತ-11ರ ವ್ಯಾಪ್ತಿಯಲ್ಲಿರುವ ಪ್ರೊಫೆಸರ್ (ಕೃಷಿ ರಸಾಯನಶಾಸ್ತ್ರ) ಮತ್ತು ಸಹಾಯಕ ಪ್ರೊಫೆಸರ್ (ಭೌತ ರಸಾಯನಶಾಸ್ತ್ರ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 28ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಅಧಿಸೂಚನೆ ದಿನಾಂಕದಿಂದ 60 ದಿನಗಳೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವೆಬ್ ಪೋರ್ಟಲ್ ಆಗಿರುವ www.dfpd.nic.in ಮೂಲಕ ಅರ್ಜಿಯನ್ನು ಡೌನ್ ಮಾಡಿಕೊಂಡು ಭರ್ತಿ ಮಾಡಬೇಕು. ಆಧಾರ್ ಕಾರ್ಡ್, ಸೇವಾ ಅನುಭವದ ದಾಖಲೆ ಸೇರಿ ಹಲವು ದಾಖಲೆಗಳನ್ನು ಲಗತ್ತಿಸಿ Under Secretary (SA), DFPD (Room No.476), Krishi Bhawan, New Delhi-110 001 ವಿಳಾಸಕ್ಕೆ ಕಳುಹಿಸಬೇಕು. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 56 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ಆಫ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸ್ನಾತಕೋತ್ತರ ಪದವಿ ಪಡೆದವರಿಗೆ ಕನಿಷ್ಠ 5 ವರ್ಷಗಳ ಸೇವಾ ಅನುಭವ ಹಾಗೂ ಪಿಎಚ್.ಡಿ ಅಧ್ಯಯನ ಮಾಡಿದವರಿಗೆ ಕನಿಷ್ಠ 3 ವರ್ಷದ ಸೇವಾ ಅನುಭವ ನಿಗದಿಪಡಿಸಲಾಗಿದೆ.