ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ದೇಶಾದ್ಯಂತ ಸುಸಜ್ಜಿತ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿಯೇ ಅವರನ್ನು “ಹೈ ವೇ ಮ್ಯಾನ್ ಆಫ್ ಇಂಡಿಯಾ” ಎಂದು ಕರೆಯಲಾಗುತ್ತದೆ. ಇದರ ಬೆನ್ನಲ್ಲೇ, “ಮುಂದಿನ 2 ವರ್ಷಗಳಲ್ಲಿ ಹೆದ್ದಾರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 10 ಲಕ್ಷ ಕೋಟಿ ರೂಪಾಯಿಯನ್ನು ವಿನಿಯೋಗಿಸಲಿದೆ” ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
“ದೇಶದ ಹೆದ್ದಾರಿಗಳನ್ನು ಇನ್ನಷ್ಟು ಸುಧಾರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅದರಲ್ಲೂ, ಈಶಾನ್ಯ ರಾಜ್ಯಗಳಲ್ಲಿ ಅಮೆರಿಕದ ದರ್ಜೆಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತದೆ. ಇದಕ್ಕಾಗಿ, 2 ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡುವ ಗುರಿ ಇದೆ. ಪೂರ್ವ ರಾಜ್ಯಗಳಲ್ಲೂ ಹೆದ್ದಾರಿಗಳ ನಿರ್ಮಾಣಕ್ಕಾಗಿ 784 ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ” ಎಂದು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.
ಪೂರ್ವ ರಾಜ್ಯಗಳಲ್ಲಿ ಹೆದ್ದಾರಿ ನಿರ್ಮಾಣಗಳ ಯೋಜನೆಗಾಗಿ ಕೇಂದ್ರ ಸರ್ಕಾರವು 3.7 ಲಕ್ಷ ಕೋಟಿ ರೂಪಾಯಿ ವ್ಯಯಿಸಲಾಗುತ್ತದೆ. ಇಷ್ಟು ಮೊತ್ತವನ್ನು ವ್ಯಯಿಸಿ ಸುಮಾರು 21 ಸಾವಿರ ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ರಸ್ತೆ ನಿರ್ಮಾಣಕ್ಕೆ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣ ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ.
55,000 ಕೋಟಿ ರೂ. ಟೋಲ್ ಸಂಗ್ರಹ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಟೋಲ್ ಆದಾಯವು 55,000 ಕೋಟಿ ರೂ.ಗಳಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದು 1.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ರಸ್ತೆ ಯೋಜನೆಗಳಿಗೆ ಈಗಾಗಲೇ ನನ್ನ ಬಳಿ 5 ಲಕ್ಷ ಕೋಟಿ ರೂ.ಗಳ ಬಜೆಟ್ ಇದೆ ಎಂದು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಅಲ್ಲದೆ, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಯೂ ಗುರಿಯಾಗಿದೆ ಎಂದು ತಿಳಿಸಿದ್ದರು.


















