ಭಾರತ ವೈವಿಧ್ಯಮಯ ರಾಷ್ಟ್ರ. ಇಲ್ಲಿ ಎಲ್ಲ ಧರ್ಮದವರು ಕೂಡ ಸಮಾನವಾಗಿ ಸಹಜ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ನಮ್ಮ ಭಾರತ ಹಿಂದೂ ರಾಷ್ಟ್ರವಾಗಿರುವುದರಿಂದ ದೇವಸ್ಥಾನಗಳು ಹೆಚ್ಚಾಗಿವೆ. ಹೀಗಾಗಿ ಹಲವಾರು ದೇವಸ್ಥಾನಗಳಲ್ಲಿ ಸಾಕಷ್ಟು ನಿಗೂಢತೆ, ವಿಶೇಷತೆಗಳು ಇವೆ. ಹಲವೆಡೆ ಪ್ರಸಾದದ್ದೇ ದೊಡ್ಡ ಸುದ್ದಿಯಾಗಿರುತ್ತದೆ. ಹಲವು ದೇವಸ್ಥಾನದಲ್ಲಿನ ಪ್ರಸಾದ ಎಷ್ಟರ ಮಟ್ಟಿಗೆ ಜನರನ್ನು ಆಕರ್ಷಿಸುತ್ತವೆ ಅಂದ್ರೆ, ಅಷ್ಟೊಂದು ಇಷ್ಟವಾಗುವಂತೆ ಇರುತ್ತವೆ.
ಈಗ ವಿಶೇಷವಾದ ಪ್ರಸಾದ ವಿತರಿಸುವ ದೇವಸ್ಥಾನವೊಂದರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಕೋಲ್ಕತ್ತಾದ ಟೆಂಗ್ರಾ ಪ್ರದೇಶದಲ್ಲಿರುವ ಕಾಳಿ ದೇವಾಲಯದಲ್ಲಿ ನೂಡಲ್ಸ್, ಫ್ರೈಡ್ ರೈಸ್ ಮತ್ತು ಮೊಮೊಸ್ ಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತಿದೆ. ಈ ಸುದ್ದಿ ಕೇಳಿದ್ದೇ ತಡ ಈ ತಿಂಡಿಯ ಪ್ರೇಮಿಗಳು ದೇವಸ್ಥಾನಕ್ಕೆ ಹೆಚ್ಚಾಗಿ ಬರುತ್ತಿದ್ದಾರಂತೆ.
ಈ ಪ್ರದೇಶವು ಚೈನಾ ಟೌನ್ ಎಂಬ ಹೆಸರಿನಿಂದಲೂ ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಚೀನೀ ಕಾಳಿ ದೇವಾಲಯ ಅಂತಾನೂ ಕರೆಯುತ್ತಾರೆ. ಈ ದೇವಾಲಯವು 60 ವರ್ಷ ಹಳೆಯದಾಗಿದ್ದು, ಈ ದೇವಿಯನ್ನು ಹಿಂದೂಗಳು ಮಾತ್ರವಲ್ಲದೆ ಚೀನೀ ಜನರು ಸಹ ಪೂಜಿಸುತ್ತಾರೆ.
ಮಾಧ್ಯಮ ವರದಿಗಳ ಪ್ರಕಾರ, ಹಲವು ವರ್ಷಗಳ ಹಿಂದೆ ಚೀನಾದ ಕುಟುಂಬವೊಂದು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ 10 ವರ್ಷದ ಮಗುವನ್ನು ಬದುಕಿಸಲು ಇಲ್ಲಿಗೆ ಕರೆ ತಂದಿದ್ದರು. ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನಿಸಿ, ಮಗು ಬದುಕುವಿದು ಕಷ್ಟ ಎಂದು ಹೇಳಿದ್ದರಂ. ಆ ಸಮಯದಲ್ಲಿ ಈ ಚೀನಿ ಕುಟುಂಬ ತಮ್ಮ ಮಗುವನ್ನು ಈ ಕಾಳಿ ದೇವಿಯ ದೇವಸ್ಥಾನದ ಬಳಿಯ ಮರದ ಕೆಳಗೆ ಬಂಡೆಗಳ ಬಳಿ ಮಲಗಿಸಿ ದೇವಿಯನ್ನು ಪ್ರಾರ್ಥಿಸಿದ್ದರು ಎನ್ನಲಾಗಿದೆ.
ಕಾಳಿ ದೇವಿಯು ಅವರ ಪ್ರಾರ್ಥನೆಗಳನ್ನು ಕೇಳಿ ಮಗುವನ್ನು ಮತ್ತೆ ಬದುಕಿಸಿದಳು ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಹೀಗಾಗಿ ಆ ಸ್ಥಳದಲ್ಲಿ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದೆ. ಒಂದು ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಚೀನಿಯರು ವಾಸಿಸುತ್ತಾರೆ. ಈ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಚೀನಿಯರು ಬರುವುದರಿಂದ ನೂಡಲ್ಸ್, ಫ್ರೈಡ್ ರೈಸ್ ನ್ನು ಪ್ರಸಾದದ ರೀತಿಯಲ್ಲಿ ನೀಡಲಾಗುತ್ತಿದೆ.



















