ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ನಡೆದು ನಾಲ್ಕು ದಿನ ಕಳೆದರೂ ಆರೋಪಿ ಮಾತ್ರ ಬಲೆಗೆ ಬಿದ್ದಿಲ್ಲ.
ಆರೋಪಿಯ ಪತ್ತೆಗೆ ಯತ್ನಿಸುತ್ತಿರುವ ಪೊಲೀಸರು ಇಲ್ಲಿಯವರೆಗೆ ಬರೋಬ್ಬರಿ 758 ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಯುವತಿಯನ್ನು ಬಲವಂತವಾಗಿ ಹಿಡಿದುಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆನಂತರ ಗಾಬರಿಯಿಂದ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಆರೋಪಿ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಮಾತ್ರ ಪೊಲೀಸರ ಬಲೆಗೆ ಬೀಳುತ್ತಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಸದ್ದಗುಂಟೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಡಿಸಿಪಿ ಸಾರಾ ಫಾತೀಮಾ ಅವರ ನೇತೃತ್ವದಲ್ಲಿ ಸದ್ದುಗುಂಟೆಪಾಳ್ಯ ಪೊಲೀಸರಿಂದ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆ ಏ. 3ರಂದು ಬೆಳಗ್ಗೆ 1.55ರ ವೇಳೆಗೆ ನಡೆದಿತ್ತು. ಇಬ್ಬರು ಯುವತಿಯರು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಏಕಾಏಕಿ ಓರ್ವ ಯುವತಿಯನ್ನು ಹಿಡಿದುಕೊಂಡು ಗೋಡೆಗೆ ಒರಗಿಸಿ ಆಕೆಯ ಖಾಸಗಿ ಅಂಗಾಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಯುವತಿಯರು ಜೋರಾಗಿ ಕಿರುಚಿಕೊಂಡ ಪರಿಣಾಮ ಕಾಮುಕ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತು ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















