ಭೋಪಾಲ್: ಮರಳಿ ನಿಮ್ಮ ಹಣ ನೀಡುತ್ತೇನೆಂದು ಪತ್ರ ಬರೆದಿಟ್ಟ ಖದೀಮನೊಬ್ಬ ಅಂಗಡಿಯೊಂದರಲ್ಲಿ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಹೀಗೆ ಪತ್ರ ಬರೆದಿಟ್ಟು ಅಂಗಡಿಯೊಂದರಲ್ಲಿ 2.45 ಲಕ್ಷ ರೂ. ಹಣ (Money) ಕಳ್ಳತನ ಮಾಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ.
ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಮೀದಾರ್ ಮೊಹಲ್ಲಾದಲ್ಲಿರುವ ಜುಜರ್ ಅಲಿ ಬೊಹ್ರಾ ಎಂಬುವವರ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಪತ್ರದಲ್ಲಿ ರಾಮ ನವಮಿಯಂದು ಮಾಡಿದ ಕೃತ್ಯಕ್ಕೆ ನಾನು ಕ್ಷಮೆ ಕೋರುತ್ತೇನೆ. ನಾನು ನಿಮ್ಮ ನೆರೆಹೊರೆಯಲ್ಲಿ ಇರುತ್ತೇನೆ. ಸಾಲದ ಹೊರೆ ಮತ್ತು ಸಾಲಗಾರರ ಕಿರುಕುಳದಿಂದ ಹಣ ಕದ್ದಿದ್ದೇನೆ. ಆರು ತಿಂಗಳಲ್ಲಿ ಹಣ ಹಿಂದಿರುಗಿಸುತ್ತೇನೆ. ಆಗ ನೀವು ನನ್ನನ್ನು ಪೊಲೀಸರಿಗೆ ಒಪ್ಪಿಸಬಹುದು ಎಂದು ಬರೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಂಗಡಿ ಮಾಲೀಕ ಇಟ್ಟಿದ್ದ 2.84 ಲಕ್ಷ ರೂ.ಗಳಲ್ಲಿ 38 ಸಾವಿರ ರೂ. ಉಳಿಸಿ, ಇನ್ನುಳಿದ ಹಣವನ್ನು ಕದ್ದಿದ್ದಾನೆ.
ಬೇಕಾದಷ್ಟು ಹಣ ಮಾತ್ರ ತೆಗೆದುಕೊಂಡಿದ್ದೇನೆ ಮತ್ತು ಉಳಿದದ್ದನ್ನು ಬ್ಯಾಗ್‌ನಲ್ಲೇ ಬಿಟ್ಟಿದ್ದೇನೆ. ನಾನು ಕಳ್ಳತನ ಮಾಡಲು ಬಯಸುವುದಿಲ್ಲ. ಆದರೆ ಈಗ ನನಗೆ ಬೇರೆ ದಾರಿಯಿಲ್ಲ. ಪತ್ರದಲ್ಲಿರುವುದೆಲ್ಲ ಸತ್ಯ ಎಂದು ಬರೆದಿದ್ದಾನೆ ಎನ್ನಲಾಗಿದೆ.