ಬೆಂಗಳೂರು: ಇತ್ತೀಚೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) (EPFO) ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವ ಪ್ರಕ್ರಿಯೆಯನ್ನು ತುಂಬ ಸರಳಗೊಳಿಸಿದೆ. ಕೆಲವೇ ತಿಂಗಳಲ್ಲಿ ಎಟಿಎಂ ಮೂಲಕವೂ ಪಿಎಫ್ ಡ್ರಾ ಮಾಡುವ ವ್ಯವಸ್ಥೆ ತರುತ್ತಿದೆ. ಇದರ ಮಧ್ಯೆಯೇ, ಕೇಂದ್ರ ಕಾರ್ಮಿಕ ಸಚಿವಾಲಯವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇನ್ನುಮುಂದೆ, ಆನ್ ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡಲು ಬಯಸುವವರು ಚೆಕ್ ಲೀಫ್ ಅಪ್ ಲೋಡ್ ಮಾಡುವ ಅಗತ್ಯವಿಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಪಿಎಫ್ ವಿತ್ ಡ್ರಾ ಕ್ಲೈಮ್ ಸಲ್ಲಿಸುವಾಗ ಸದಸ್ಯರು ಈಗಾಗಲೇ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಯುಎಎನ್ ಖಾತೆಗೆ ಲಿಂಕ್ ಮಾಡಿರುತ್ತಾರೆ. ಹೀಗೆ ಲಿಂಕ್ ಮಾಡಿರುವ ಖಾತೆಗೆ ಸದಸ್ಯರು ಇನ್ನುಮುಂದೆ ಮುಂದೆ ತಮ್ಮ ಚೆಕ್ ಲೀಫ್ ಚಿತ್ರ ಅಥವಾ ಪಾಸ್ ಬುಕ್ ನ ದೃಢೀಕೃತ ಪ್ರತಿಯನ್ನು ಅಪ್ ಲೋಡ್ ಮಾಡುವ ಅಗತ್ಯವಿಲ್ಲ. ಪಾಸ್ಬುಕ್ ಅಥವಾ ರದ್ದಾದ ಚೆಕ್ ನ ಛಾಯಾಪ್ರತಿ ಅಪ್ ಲೋಡ್ ಮಾಡುವುದು ಕಡ್ಡಾಯವಾಗಿತ್ತು. ಈಗ ಈ ಗೊಡವೆಯು ಪಿಎಫ್ ಸದಸ್ಯರಿಗೆ ಇರುವುದಿಲ್ಲ.
ಕಂಪನಿ ಅನುಮತಿ ಬೇಕಿಲ್ಲ
ಇದುವರೆಗೆ ಇಪಿಎಫ್ಒ ಸದಸ್ಯರು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸೇರಿಸಬೇಕಿತ್ತು. ಅದಕ್ಕೆ ತಾವು ಕೆಲಸ ಮಾಡುತ್ತಿರದ್ದ ಸಂಸ್ಥೆಯಲ್ಲಿರುವ ಉದ್ಯೋಗದಾತರು ಪರಿಶೀಲಿಸಿ ಅನುಮೋದನೆ ನೀಡಬೇಕಾಗುತ್ತಿತ್ತು. ಆದರೆ ಈ ಹೊಸ ನಿಯಮದಲ್ಲಿ ಈ ಅನುಮೋದನೆ ಹಂತವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಬ್ಯಾಂಕ್ ಖಾತೆಯ ಪ್ರಾಮಾಣಿಕತೆಯನ್ನು ಇಪಿಎಫ್ಓ ಸ್ವತಃ ತಾಂತ್ರಿಕವಾಗಿ ಪರಿಶೀಲಿಸುತ್ತದೆ. ಇದರ ಪರಿಣಾಮವಾಗಿ, ಹಲವು ದಿನಗಳು ಕಳೆಯುತ್ತಿದ್ದ ಸಮಯ ಈಗ ಕೆಲವೇ ಗಂಟೆಗಳಲ್ಲಿ ಅಥವಾ 1-2 ದಿನಗಳಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ಅಷ್ಟೇ ಅಲ್ಲ, ಇಪಿಎಫ್ಒ ಸದಸ್ಯರು ಇನ್ನುಮುಂದೆ ತಮ್ಮ ಖಾತೆಯನ್ನು ಸರಳವಾಗಿ ಬದಲಾಯಿಸಬಹುದು. ಅಂದರೆ ಈಗ ತಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಬದಲಾಯಿಸಬೇಕಾದರೆ, ಹೊಸ ಖಾತೆ ಸಂಖ್ಯೆ ಮತ್ತು ಐಎಫ್ ಎಸ್ ಸಿ ಕೋಡ್ ಅನ್ನು ನೇರವಾಗಿ ನಮೂದಿಸಬಹುದು. ಈ ಪ್ರಕ್ರಿಯೆಯನ್ನು ಆಧಾರ್ ಒಟಿಪಿ ಮೂಲಕ ದೃಢೀಕರಿಸಬೇಕಾಗುತ್ತದೆ. ಈ ಹಂತದಿಂದ ಬ್ಯಾಂಕ್ ಬದಲಾವಣೆ ಪ್ರಕ್ರಿಯೆಯು ಹೆಚ್ಚು ಸುರಕ್ಷಿತ ಮತ್ತು ವೇಗವಾಗಿ ನಡೆಯುವಂತಾಗುತ್ತದೆ. ಆದರೆ ಮೊದಲು ಖಾತೆ ಬದಲಾವಣೆಗೂ ಉದ್ಯೋಗದಾತರ ಸಹಿ ಅಥವಾ ಅನುಮೋದನೆ ಬೇಕಾಗುತ್ತಿತ್ತು. ಆದರೆ, ಈಗ ಈ ನಿಯಮದಿಂದ ಸದಸ್ಯರು ತಾವೆ ಖಾತೆ ವಿವರ ಬದಲಿಸಬಹುದಾದ ವ್ಯವಸ್ಥೆ ಜಾರಿಗೊಳಿಸಲಾಗಿದೆ.