ಮುಂಬೈ: ಶಹೀದ್ ಸಿನಿಮಾದಿಂದ ಅಪಾರ ಖ್ಯಾತಿ ಗಳಿಸಿದ್ದ, ದೇಶಭಕ್ತಿಯ ಸಿನಿಮಾಗಳಿಂದಲೇ ದೇಶದ ಮನೆಮಾತಾಗಿದ್ದ ಬಾಲಿವುಡ್ ನಟ ಮನೋಜ್ ಕುಮಾರ್ (87) (Manoj Kumar) ಅವರು ನಿಧನರಾಗಿದ್ದಾರೆ. ಮುಂಬೈನಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಹೃದಯ ಹಾಗೂ ಲಿವರ್ ಸಂಬಂಧಿ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮನೋಜ್ ಕುಮಾರ್ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. “ಮನೋಜ್ ಕುಮಾರ್ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಬೇಸರವಾಗಿದೆ. ಅವರು ದೇಶದ ಸಿನಿಮಾ ರಂಗದ ಮೇರು ಪ್ರತಿಭೆಯಾಗಿದ್ದರು. ದೇಶಭಕ್ತಿ ಸಾರುವ ಸಿನಿಮಾಗಳಿಂದಲೇ ಅವರು ದೇಶವಾಸಿಗಳ ಮನದಲ್ಲಿ ಎಂದಿಗೂ ನೆಲೆಸಿರುತ್ತಾರೆ” ಎಂದು ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
ದೇಶಭಕ್ತಿಯನ್ನು ಸಾರುವ ಸಿನಿಮಾಗಳಿಂದೇ ಮನೋಜ್ ಕುಮಾರ್ ಅವರು ಹೆಚ್ಚು ಖ್ಯಾತಿ ಗಳಿಸಿದ್ದರು. ಶಹೀದ್ (1995), ಉಪಕಾರ್ (1967), ರಂಗ್ ದೇ ಬಸಂತಿ (2006), ಪೂರಬ್ ಔರ್ ಪಶ್ಚಿಮ್ (1970), ರೋಟಿ ಕಪ್ಡಾ ಔರ್ ಮಕಾನ್ (1974) ಸೇರಿ ಹಲವು ಸಿನಿಮಾಗಳು ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿದ್ದವು. ಅವರು ಸಿನಿಮಾ ರಂಗದಲ್ಲಿ ಭರತ್ ಕುಮಾರ್ ಎಂದೇ ಹೆಸರುವಾಸಿಯಾಗಿದ್ದರು.
ಪಂಜಾಬ್ ನ ಅಮೃತಸರದಲ್ಲಿ 1937ರ ಜುಲೈ 24ರಂದು ಜನಿಸಿದ ಅವರು ಬಾಲಿವುಡ್ ಸಿನಿಮಾಗಳತ್ತ ಆಕರ್ಷಿತರಾಗಿ ನಟನೆಯತ್ತ ಹೊರಳಿದರು. ನಟನೆಯ ಜತೆಗೆ ಅವರು ನಿರ್ದೇಶನದಲ್ಲೂ ತೊಡಗಿಕೊಂಡಿದ್ದರು. ಒಂದು ನ್ಯಾಷನಲ್ ಅವಾರ್ಡ್ ಹಾಗೂ ಏಳು ಫಿಲಂ ಫೇರ್ ಪ್ರಶಸ್ತಿಗಳು ಕೂಡ ಲಭಿಸಿವೆ. ಸಿನಿಮಾ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಪರಿಗಣಿಸಿ ಕೇಂದ್ರ ಸರ್ಕಾರವು 1992ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.