ಬೆಂಗಳೂರು: ಕರ್ನಾಟಕ (Karnataka) ದ ದಕ್ಷ ಪೊಲೀಸ್ ಅಧಿಕಾರಿಯೊಬ್ಬರಲ್ಲಿ ಒಬ್ಬರಾಗಿದ್ದ ಬಿ.ಎನ್ ಗರುಡಾಚಾರ್ (BN Garudachar) ವಿಧಿವಶರಾಗಿದ್ದು, ಇಡೀ ಇಲಾಖೆ ಸ್ಮರಿಸುತ್ತಿದೆ.
90ರ ಹರೆಯದ ಗರುಡಾಚಾರ್ ಅವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ದಕ್ಷತೆ ಮತ್ತು ಪ್ರಾಮಾಣಿಕತೆ ಮೆರೆದಿದ್ದರು. ವಿಲ್ಸನ್ ಗಾರ್ಡನ್ (Wilson Garden) ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹಳ್ಳಿಯ ಕೃಷಿ ಕುಟುಂಬದಲ್ಲಿ 1929ರಲ್ಲಿ ಹುಟ್ಟಿದ ಬಿ.ಎನ್. ಗರುಡಾಚಾರ್, ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಮುಂದುವರಿದು, 1953ರಲ್ಲಿ ಐಪಿಎಸ್ ಪಾಸ್ ಮಾಡಿ, ಮೊದಲಿಗರೆನಿಸಿಕೊಂಡಿದ್ದರು.
ನಂತರ ಸರ್ವೇಯರ್, ಅಬಕಾರಿ ಇನ್ಸ್ಪೆಕ್ಟರ್ ಕೆಲಸಕ್ಕೆ ಸೇರಿದರು. ಅಲ್ಲಿಂದ ನೇರವಾಗಿ ಐಪಿಎಸ್ ಮಾಡಿ, ತಿರುವನ್ವೇಲಿಯಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸಿದ್ದರು. ಕೊಪ್ಪಳ, ಹುಮ್ನಾಬಾದ್, ತುಮಕೂರು, ಬಳ್ಳಾರಿ, ಬೆಂಗಳೂರು ಜಿಲ್ಲಾ ಎಸ್ಪಿಯಾಗಿ ಉತ್ತಮ ಸೇವೆ ಸಲ್ಲಿಸಿ ಹೆಸರಾಗಿದ್ದರು. 1963ರಲ್ಲಿ ಬೆಂಗಳೂರು ನಗರದ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದರು. ಅಡಿಷನಲ್ ಐಜಿ, ಡಿಜಿ ಮತ್ತು ಐಜಿಪಿಯಾಗಿ ನಿವೃತ್ತರಾದರು.