ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ರಚಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಎಂಟನೇ ವೇತನ ಆಯೋಗ (8th Pay Commission) ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ ವರ್ಷದ ಏಪ್ರಿಲ್ 1ರಿಂದ ಶಿಫಾರಸುಗಳು ಜಾರಿಗೆ ಬರಲಿವೆ. ಇನ್ನು, 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ ನೌಕರರ ಮಾಸಿಕ ಸಂಬಳ ಎಷ್ಟು ಜಾಸ್ತಿಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಇದರ ಬೆನ್ನಲ್ಲೇ, 8ನೇ ವೇತನ ಆಯೋಗದ ಕುರಿತು ಅಮೆರಿಕದ ಹೂಡಿಕೆ ಬ್ಯಾಂಕ್ ಆಗಿರುವ ಗೋಲ್ಡ್ ಮನ್ ಸಾಚ್ಸ್ ವರದಿ ಮಾಡಿದೆ. “8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ ಕೇಂದ್ರ ಸರ್ಕಾರಿ ನೌಕರರ ಮಾಸಿಕ ಸಂಬಳವು 19 ಸಾವಿರ ರೂ. ಹೆಚ್ಚಾಗಲಿದೆ” ಎಂದು ವರದಿ ತಿಳಿಸಿದೆ. ಇದರಿಂದ ಕೇಂದ್ರದ 50 ಲಕ್ಷ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ, ಮಧ್ಯಮ ಮಟ್ಟದ ಸರ್ಕಾರಿ ನೌಕರರ ವೇತನವು ತಿಂಗಳಿಗೆ ಸರಾಸರಿ 1 ಲಕ್ಷ ರೂ. (ತೆರಿಗೆ ಪೂರ್ವ) ಇದೆ. ಬಜೆಟ್ನಲ್ಲಿ 8ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಮೀಸಲಿಡುವ ಹಣದ ಆಧಾರದ ಮೇಲೆ, ಕೇಂದ್ರ ಸರ್ಕಾರಿ ನೌಕರರ ಸಂಬಳ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬುದನ್ನು ಗೋಲ್ಡ್ಮನ್ ಸಾಚ್ಸ್ ಅಂದಾಜಿಸಿದೆ.
ಇದರ ಪ್ರಕಾರ ಬಜೆಟ್ ನಲ್ಲಿ ಸರ್ಕಾರ 1.75 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಮಧ್ಯಮ ಮಟ್ಟದ ಕೇಂದ್ರ ಸರ್ಕಾರಿ ನೌಕರರ ಸಂಬಳ ತಿಂಗಳಿಗೆ 1,14,600 ರೂ.ಗೆ ಏರಿಕೆಯಾಗಬಹುದು. ಅದೇ ರೀತಿ 2 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಸಂಬಳವು ತಿಂಗಳಿಗೆ 1,16,700 ರೂ.ಗೆ ಹೆಚ್ಚಾಗಬಹುದು. ಇನ್ನು ಬಜೆಟ್ ನಲ್ಲಿ 2.25 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಕೇಂದ್ರ ನೌಕರರ ಸಂಬಳವು ತಿಂಗಳಿಗೆ 1,18,800 ರೂ. ಹೆಚ್ಚಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.