ಧಾರವಾಡ: ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಉಚ್ಛಾಟಿಸಲಾಗಿದ್ದು, ಪಂಚಮಸಾಲಿ(Lingayat Panchamsali) ಪೀಠದ ಜಯಮೃತ್ಯುಂಜಯ ಸ್ವಾಮಿ (Basavajaya Mruthyunjaya Swamiji) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪಂಚಮಸಾಲಿಗರು ಬಿಜೆಪಿ ತೊರೆಯುವಂತೆ ಕರೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟಿಸಿದ್ದನ್ನು ಲಿಂಗಾಯತ ಪಂಚಮಸಾಲಿ ಸಮಾಜ ಖಂಡಿಸುತ್ತದೆ. ಇದಕ್ಕೆಲ್ಲ ಬಿಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬವೇ ಕಾರಣ. ಇದನ್ನು ನಾನು ನೇರವಾಗಿ ಆರೋಪ ಮಾಡುತ್ತೇನೆ. ಪಂಚಮಸಾಲಿಗರು ಬಿಜೆಪಿ ತೊರೆದು ಬರಬೇಕು. ಯತ್ನಾಳ ಉಚ್ಛಾಟನೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪಂಚಮಸಾಲಿಗಳು ಬಿಜೆಪಿಯಿಂದ ಹೊರ ಬರಬೇಕು ಎಂದು ಕರೆ ನೀಡಿದ್ದಾರೆ.
ಈ ಹೋರಾಟ ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ವಿರುದ್ಧ ಅಲ್ಲ. ಪಂಚಮಸಾಲಿಗಳ ನಾಯಕತ್ವ ತುಳಿದವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಕಿತ್ತೂರು ರಾಣಿ ಚನ್ನಮ್ಮಳಿಗೆ ಮೋಸ ಮಾಡಿದ ಶಕ್ತಿಗಳೇ ಈಗ ಹೀಗೆ ಮಾಡುತ್ತಿವೆ ಎಂದು ಗುಡುಗಿದ್ದಾರೆ. ಈಗ ಬಿಜೆಪಿ 66 ಸ್ಥಾನ ಬಂದಿದೆ, ಮುಂದೆ 36 ಸ್ಥಾನವೂ ಬರುವುದಿಲ್ಲ. ಯತ್ನಾಳ್ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕಾರಣಕ್ಕ ಹೀಗೆ ಮಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಏನೂ ಮಾಡದಿದ್ದರೂ ಬಿಜೆಪಿ ಜೊತೆಗಿದ್ದೇವೆ. ಅನ್ಯಾಯ ಸಹಿಸಿಕೊಂಡು ಶೇ.80ರಷ್ಟು ಸಮುದಾಯ ಬಿಜೆಪಿ ಜೊತೆಗಿದೆ. ಆದರೆ, ಸಮಾಜದ ನಾಯಕನನ್ನು ಉಚ್ಚಾಟಿಸಿದ್ದೀರಿ, ಇದು ಬಿಜೆಪಿಗೆ ಹಿನ್ನಡೆಯಾಗಿದೆ. ಹೀಗಾಗಿ ಇಂದಿನಿಂದಲೇ ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.