ಲಖನೌ: ಪತಿಯ ಕಾಟ ಸಹಿಸದೆ ಪತ್ನಿ ಆತ್ಮಹತ್ಯೆ ಎಂಬ ಸುದ್ದಿಗಳು ಮೊದಲು ಪ್ರತಿದಿನ ಕೇಳಿಬರುತ್ತಿದ್ದವು. ಆದರೆ, ಇತ್ತೀಚೆಗೆ ಪತ್ನಿಯ ಕಾಟ ಸಹಿಸದೆ ಪತಿ ಆತ್ಮಹತ್ಯೆ ಎಂಬ ಸುದ್ದಿಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಕಾಟ ಸಹಿಸಲು ಆಗದೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ವಿಷ ಸೇವಿಸಿದ್ದಾನೆ.
“ಇವತ್ತೇ ನನಗೆ ಕೊನೆಯ ದಿನ. ನನಗೆ ನನ್ನ ಹೆಂಡತಿ, ಆಕೆಯ ತಂದೆ-ತಾಯಿ, ಸಂಬಂಧಿಕರು ನೀಡುತ್ತಿರುವ ಕಿರುಕುಳ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ನಾನು ವಿಷ ಸೇವಿಸುತ್ತಿದ್ದೇನೆ. ನನ್ನ ಸಾವಿಗೆ ನನ್ನ ಪತ್ನಿ ಜ್ಯೋತಿ, ಆಕೆಯ ಕುಟುಂಬಸ್ಥರೇ ಕಾರಣ” ಎಂದು ಅಳಲು ತೋಡಿಕೊಳ್ಳುತ್ತಲೇ ವಿಷ ಸೇವಿಸಿದ್ದಾನೆ. ವಿಷ ಸೇವಿಸಿದ ವ್ಯಕ್ತಿಯನ್ನು ರಾಹುಲ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
“ನನ್ನ ತಂದೆಗೆ ಈಗ 80-85 ವರ್ಷ ವಯಸ್ಸು. ನನ್ನ ತಾಯಿಗೂ 60-65 ವರ್ಷ ವಯಸ್ಸಾಗಿದೆ. ಅವರನ್ನು ನೋಡಿಕೊಳ್ಳಬೇಕು. ಇದರ ಮಧ್ಯೆಯೇ ಪತ್ನಿ ಜ್ಯೋತಿ ಹಾಗೂ ಆಕೆ ಪೋಷಕರು ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ. ಅಲ್ಲದೆ 12 ಲಕ್ಷ ರೂಪಾಯಿ ಕೊಡಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ನನ್ನ ಸಹೋದರ ನಾನು ಒಟ್ಟಿಗೆ ಇಲ್ಲ. ಆದರೂ ಆತನಿಗೆ ಕಿರುಕುಳ ನೀಡುತ್ತಿದ್ದಾರೆ. ಹಾಗಾಗಿ, ನಾನು ಬದುಕಿರುವುದರಲ್ಲಿ ಅರ್ಥವೇ ಇಲ್ಲ ಎಂದು ಸಾಯಲು ತೀರ್ಮಾನಿಸಿದ್ದೇನೆ” ಎಂಬುದಾಗಿ ಹೇಳಿದ್ದಾರೆ.
“ನನಗೆ 12 ಲಕ್ಷ ರೂಪಾಯಿ ಕೊಡು ಎಂದರೆ ಎಲ್ಲಿಂದ ತರಬೇಕು. ಪತ್ನಿಯ ಕುಟುಂಬಸ್ಥರು ಬಂದು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರಿಂದಾಗಿ ನನಗೆ ಜೀವನವೇ ಸಾಕಾಗುತ್ತಿದೆ” ಎಂದು ಹೇಳಿದ್ದಾನೆ. ಈತನ ವೀಡಿಯೊ ವೈರಲ್ ಆಗುತ್ತಲೇ ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಇದುವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.