ಕೇಂದ್ರ ಸರ್ಕಾರದ ಲಕ್ಷಾಂತರ ನೌಕರರು ಹಾಗೂ ಪಿಂಚಣಿದಾರರ ಸಂಬಳದಲ್ಲಿ ಭಾರಿ ಏರಿಕೆಯಾಗುವ ಹಿನ್ನೆಲೆಯಲ್ಲಿ 8ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ನೌಕರರು ಹಾಗೂ ಪಿಂಚಣಿದಾರರು ಕಾಯುತ್ತಿದ್ದಾರೆ. ಇದರ ಮಧ್ಯೆಯೇ, 8ನೇ ವೇತನ ಆಯೋಗದ ರಚನೆಯ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
“8ನೇ ವೇತನ ಆಯೋಗದ ಶಿಫಾರಸುಗಳ ಜಾರಿಯಿಂದ 36.57 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 33.91 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಕೇಂದ್ರ ಸರ್ಕಾರವು ಇನ್ನೂ ವೇತನ ಆಯೋಗವನ್ನು ರಚನೆ ಮಾಡಿಲ್ಲ. ಶೀಘ್ರದಲ್ಲೇ ವೇತನ ಆಯೋಗವನ್ನು ರಚಿಸಲಾಗುವುದು” ಎಂದು ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಒಬ್ಬ ಚೇರ್ಮನ್ ಹಾಗೂ ಇಬ್ಬರು ಸದಸ್ಯರನ್ನು ನೇಮಿಸಿ, 8ನೇ ವೇತನ ಆಯೋಗವನ್ನು ರಚಿಸಲಿದೆ ಎಂದು ತಿಳಿದುಬಂದಿದೆ. ಕಾರ್ಯದರ್ಶಿ ಹಂತದ ಅಧಿಕಾರಿಗಳನ್ನು ಆಯೋಗಕ್ಕೆ ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ವೇತನ ಆಯೋಗ ರಚನೆಯಾಗಿ, ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಕೇಂದ್ರ ಸರ್ಕಾರವು ಶಿಫಾರಸುಗಳಿಗೆ ಅನುಮೋದನೆ ನೀಡಿದ ಬಳಿಕ ವೇತನ ಆಯೋಗವು ಜಾರಿಗೆ ಬರುತ್ತದೆ. 2026ರ ಏಪ್ರಿಲ್ 1ರಿಂದ ವೇತನ ಆಯೋಗ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಹೊಸ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ ನೌಕರರ ಬೇಸಿಕ್ ಸಂಬಳವು 18 ಸಾವಿರ ರೂ.ನಿಂದ 51,480 ರೂ.ಗೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.