ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ವ್ಯಾಪಕ ಪ್ರಮಾಣದಲ್ಲಿ ಕಾಡು ನಾಶವಾಗಿರುವ ಘಟನೆ ನಡೆದಿದೆ.
ಕಿಡಿಗೇಡಿಗಳೇ ಬೆಂಕಿ ಇಟ್ಟಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಪರಿಣಾಮ 20ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿನ ಕಾಡು ಸುಟ್ಟು ಹೋಗಿದೆ. ಈ ಘಟನೆ ಶನಿವಾರ ನಡೆದಿದೆ. ಚುಂಚನಹಳ್ಳಿ ಗ್ರಾಮದ ಕಾಡಂಚಿನ ಜಮೀನಿನ ಭಾಗದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಬೆಟ್ಟದ ಮರ, ಗಿಡ, ಸಸಿಗಳು ಸುಟ್ಟು ಹೋಗಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳ ಹರಸಾಹಸ ಪಡಬೇಕಾಯಿತು.
ಈ ಕಿರು ಅರಣ್ಯ ಪ್ರದೇಶದಲ್ಲಿ ಜಿಂಕೆಗಳು, ಮೊಲ, ಕರಡಿ ಚಿರತೆಗಳು ವಾಸಿಸುತ್ತಿವೆ. ಆದರೆ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾಡು ಪ್ರಾಣಿಗಳು ದಿಕ್ಕಪಾಲಾಗಿ ಓಡಿವೆ ಎನ್ನಲಾಗುತ್ತಿದೆ. ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.