ಮಂಡ್ಯ: ತಾಯಿಯೊಬ್ಬರು ಬೈಕ್ ಅಪಘಾತದಲ್ಲಿ ಮಕ್ಕಳ ಎದುರೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಜಿಲ್ಲೆಯ (Mandya) ಮಳವಳಿಯಲ್ಲಿ ಈ ಘಟನೆ ನಡೆದಿದೆ. ಮದ್ದೂರಿನ ಕುಂದೂರು ಗ್ರಾಮದ ಶಿಲ್ಪಾ ಸಾವನ್ನಪ್ಪಿರುವ ತಾಯಿ. ತಾಯಿ ಶಿಲ್ಪಾ ಪ್ರತಿ ದಿನ ತನ್ನ ಮಕ್ಕಳಿಬ್ಬರನ್ನು ಶಾಲೆಗೆ ಕರೆದುಕೊಂಡು ಹೋಗುವುದು ಹಾಗೂ ಬಿಟ್ಟು ಬರುವುದನ್ನು ಮಾಡುತ್ತಿದ್ದರು. ಎಂದಿನಂತೆ ಶನಿವಾರ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದ ವೇಳೆ ಬೈಕ್ ಗೆ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಹೆಲ್ಮೆಟ್ ಧರಿಸಿದರೂ ಶಿಲ್ಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಬದಿ ಮಕ್ಕಳು ಗೋಳಾಡಿದ್ದಾರೆ. ಅಲ್ಲದೇ, ಘಟನೆಯಲ್ಲಿ 7 ವರ್ಷದ ಅನನ್ಯ, 5 ವರ್ಷದ ಮಾನ್ಯ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೊಲೆರೋ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



















