ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 9 ವಿಕೆಟ್ ಕಿತ್ತ ಭಾರತದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ತಮ್ಮ ಎರಡನೇ ಏಕದಿನ ಪಂದ್ಯದಲ್ಲಿಯೇ 5 ವಿಕೆಟ್ ಪಡೆದ ಖ್ಯಾತಿ ತಮ್ಮದಾಗಿಕೊಂಡಿದ್ದರು. ಅವರ ಈ ಅದ್ಭುತ ಪ್ರದರ್ಶನದೊಂದಿಗೆ ಭಾರತ ಚಾಂಪಿಯನ್ಸ್ ಟ್ರೋಫಿ 2025 ಕಪ್ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಅದೇ ಸ್ಥಳದಲ್ಲಿ 2021ರ ಟಿ20 ವಿಶ್ವಕಪ್‌ನಲ್ಲಿ ಅವರ ಅನುಭವ ವಿಭಿನ್ನವಾಗಿತ್ತು. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ವರುಣ್ ಅವರನ್ನು ಭಾರತದ “ಎಕ್ಸ್-ಫ್ಯಾಕ್ಟರ್” ಬೌಲರ್ ಎಂದು ಕರೆಯಲಾಗಿತ್ತು. ಆದರೆ ಅವರು ವಿಫಲರಾಗಿದ್ದು, ಒಂದೇ ಒಂದು ವಿಕೆಟ್ ಕೂಡ ಪಡೆಯಲಾಗಿರಲಿಲ್ಲ. ಪಾಕಿಸ್ತಾನ ವಿರುದ್ಧ ಭಾರತ ಕಂಡ 10 ವಿಕೆಟ್‌ಗಳ ಭಾರೀ ಸೋಲಿನಲ್ಲೂ ಅವರು ಭಾಗವಾಗಿದ್ದರು. ಹೀಗಾಗಿ ಅವರು ಸಾಕಷ್ಟು ಬೆದರಿಕೆಗಳನ್ನು ಎದುರಿಸಿದ್ದರು.
ವಿಶ್ವಕಪ್ ಬಳಿಕ, ಅವರು ತೀವ್ರ ದುಃಖಕ್ಕೆ ಒಳಗಾಗಿದ್ದರು. ಭಾರತ ತಂಡಕ್ಕೆ ಆಯ್ಕೆಯಾದರೂ, ನಿರೀಕ್ಷಿತ ಪ್ರದರ್ಶನ ನೀಡಲಾಗಿಲ್ಲ ಎಂಬ ಪಶ್ಚಾತ್ತಾಪ ಕಾಡಿತ್ತು. ಭಾರತಕ್ಕೆ ಹಿಂತಿರುಗಿದಾಗ, ಕೆಲವರು ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಅವರ ಮನೆವರೆಗೂ ಬೆನ್ನಟ್ಟಿದ್ದರು. ಈ ಘಟನೆಗಳನ್ನು ಅವರು ಹೇಳಿಕೊಂಡಿದ್ದಾರೆ.
“ಆಗಿನ ಕಾಲ ನನ್ನ ಜೀವನದ ಕತ್ತಲೆ ಹಂತವಾಗಿತ್ತು. ನಾನು ತೀವ್ರ ನಿರಾಸೆಯಿಂದಿದ್ದೆ, ಏಕೆಂದರೆ ವಿಶ್ವಕಪ್‌ಗಾಗಿ ಹೆಚ್ಚಿನ ನಿರೀಕ್ಷೆಗಳೊಂದಿಗೆ ಆಯ್ಕೆಯಾದರೂ, ನಾನು ಸೂಕ್ತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾನು ಒಂದು ವಿಕೆಟ್ ಕೂಡ ಪಡೆಯದೇ ಉಳಿದಿದ್ದಕ್ಕಾಗಿ ಪಶ್ಚಾತ್ತಾಪಪಟ್ಟೆ. ಮೂರು ವರ್ಷಗಳ ಕಾಲ ತಂಡಕ್ಕೆ ಆಯ್ಕೆಯಾಗಲಿಲ್ಲ. ಆದ್ದರಿಂದ, ತಂಡಕ್ಕೆ ಮರಳುವ ಅವಕಾಶ ಕಠಿಣವಾಗಿತ್ತು,” ಎಂದು ವರುಣ್ ಯೂಟ್ಯೂಬ್ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ.
“2021ರ ಟಿ20 ವಿಶ್ವಕಪ್ ನಂತರ ನನಗೆ ಬೆದರಿಕೆ ಕರೆಗಳು ಬಂದವು. ‘ನೀನು ಭಾರತಕ್ಕೆ ಮರಳಬೇಡ. ಪ್ರಯತ್ನಿಸಿದರೆ ಸುಮ್ಮನೆ ಬಿಡೆವು ‘ ಎಂದು ಕೆಲವು ಜನರು ಹೆದರಿಸಿದರು. ನನ್ನ ಮನೆವರೆಗೂ ಬಂದಿದ್ದರು. ಕೆಲವೊಮ್ಮೆ ನಾನು ತಪ್ಪಿಸಿಕೊಳ್ಳಬೇಕಾಯಿತು. ವಿಮಾನ ನಿಲ್ದಾಣದಿಂದ ಮನೆಗೆ ಹಿಂತಿರುಗುವಾಗ, ಕೆಲವರು ನನ್ನನ್ನು ಬೈಕ್‌ನಲ್ಲಿ ಹಿಂಬಾಲಿಸಿದರು. ಅಭಿಮಾನಿಗಳು ಭಾವೋದ್ವಿಗಗೊಳ್ಳುತ್ತಾರೆ. ಅದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ,” ಎಂದಿದ್ದಾರೆ ವರುಣ್.
ಫೈನಲ್‌ನಲ್ಲಿ ವರುಣ್ ಪಾತ್ರ
ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ವರುಣ್ ತಲಾ 2 ವಿಕೆಟ್ ಕಿತ್ತಿದ್ದರು. ಈ ಯಶಸ್ಸು ಅವರ ಹಿಂದಿನ ವಿಶ್ವಕಪ್ ವೈಫಲ್ಯವನ್ನು ಮರೆ ಮಾಡಿದೆ.
2021ರ ಟಿ20 ವಿಶ್ವಕಪ್ ವಿಫಲತೆಯ ನಂತರ, ವರುಣ್ ತಮ್ಮ ಆಟದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಬೇಕಾಯಿತು. ತಮ್ಮ ದಿನಚರಿಯನ್ನು ಸಂಪೂರ್ಣವಾಗಿ ಪರಿವರ್ತಿಸಿಕೊಂಡಿದ್ದು, ಅಭ್ಯಾಸದ ವಿಧಾನವನ್ನೂ ಪರಿಷ್ಕರಿಸಿದರು.
“2021ರ ಬಳಿಕ ನಾನು ನನ್ನ ಆಟದಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕಾಯಿತು. ನನ್ನ ದಿನಚರಿ, ಅಭ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಯಿತು. ಹಿಂದೆ ನಾನು ಪ್ರತಿದಿನ 50 ಚೆಂಡುಗಳ ಅಭ್ಯಾಸ ಮಾಡುತ್ತಿದ್ದೆ.ಬಳಿಕ ಅದನ್ನು ದುಪ್ಪಟ್ಟುಗೊಳಿಸಿದೆ. ಆಯ್ಕೆದಾರರು ಮತ್ತೆ ನನಗೆ ಅವಕಾಶ ನೀಡುವುದೆಂಬ ಭರವಸೆ ಇಲ್ಲದಿದ್ದರೂ, ನಾನು ನಿರಂತರವಾಗಿ ಶ್ರಮಿಸುತ್ತಿದ್ದೆ. ಮೂರು ವರ್ಷಗಳ ನಂತರ, ನಾನು ಎಲ್ಲಾ ಆಸೆ ತೊರೆದುಬಿಟ್ಟಿದ್ದೆ. ಆದರೆ ನಾವು ಐಪಿಎಲ್ ಗೆದ್ದೆವು, ನಂತರ ನನಗೆ ತಂಡಕ್ಕೆ ಕರೆಬಂದಿತು. ನನಗೆ ತುಂಬಾ ಸಂತೋಷವಾಯಿತು,” ಎಂದು ವರುಣ್ ಹೇಳಿದ್ದಾರೆ.
“ಇಷ್ಟು ಒಳ್ಳೆಯ ಸಂಗತಿಗಳು ಒಂದೇ ಸಲ ನಡೆಯುತ್ತಿರುವುದನ್ನು ನಾನು ನಂಬಲಾಗುತ್ತಿಲ್ಲ. ನಾನು ಇನ್ನಷ್ಟು ಮೆಟ್ಟಿಲು ಹತ್ತಲು ಬಯಸುತ್ತೇನೆ. ನಾನು ಹಿಂದಿನ ವೈಫಲ್ಯಗಳನ್ನು ಅನುಭವಿಸಿದ್ದೇನೆ, ಟೀಕೆಗಳು ಹೇಗೆ ಹೊಳೆಯಬಹುದು ಎಂಬುದು ನನಗೆ ಗೊತ್ತು. ಆದರೆ ಈಗ, ಹಿಂದಿನ ಕ್ಷಣಗಳನ್ನು ನೆನೆಸಿಕೊಂಡಾಗ ಮತ್ತು ನಾನು ಪಡೆಯುತ್ತಿರುವ ಮೆಚ್ಚುಗೆಗಳನ್ನು ನೋಡಿದಾಗ ಸಂತೋಷವಾಗುತ್ತದೆ,” ಎಂದಿದ್ದಾರೆ.
ಮಾರ್ಚ್ 22ರಿಂದ ಆರಂಭವಾಗುವ ಐಪಿಎಲ್ 2025ರಲ್ಲಿ ವರುಣ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಲಿದ್ದು, ತಂಡವನ್ನು ಮತ್ತೊಮ್ಮೆ ಪ್ರಶಸ್ತಿ ಗೆಲ್ಲಿಸುವ ಉದ್ದೇಶ ಹೊಂದಿದ್ದಾರೆ.