ಲಖನೌ: ಪಾಕಿಸ್ತಾನದ ಮಹಿಳೆಯೊಬ್ಬರ ಹನಿ ಟ್ರ್ಯಾಪ್ ಬಲೆಗೆ ಬಿದ್ದಿರುವ ಉತ್ತರ ಪ್ರದೇಶದ ವ್ಯಕ್ತಿಯೊಬ್ಬನನ್ನು ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಫಿರೋಜಾ ಬಾದ್ ನಲ್ಲಿರುವ ಶಸ್ತ್ರಾಸ್ತ್ರಗಳ ತಯಾರಿಕೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬನನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನನ್ನು ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
ಪಾಕಿಸ್ತಾನ ಗುಪ್ತಚರ ಸಂಸ್ಥೆ (ಐಎಸ್ಐ) ಏಜೆಂಟ್ ಆಗಿರುವ ಮಹಿಳೆಯು, ನೇಹಾ ಶರ್ಮಾ ಎಂಬ ಹೆಸರಿನ ಖಾತೆಯಿಂದ ರವೀಂದ್ರ ಕುಮಾರ್ ಗೆ ಫೇಸ್ ಬುಕ್ ರಿಕ್ವೆಸ್ಟ್ ಬಂದಿದೆ. ನೇಹಾ ಶರ್ಮಾ ಹನಿಟ್ರ್ಯಾಪ್ ಗೆ ಸಿಲುಕಿದ ರವೀಂದ್ರ ಕುಮಾರ್, ಆಕೆಗೆ ಭಾರತದ ಕುರಿತು ಗೌಪ್ಯ ಹಾಗೂ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದಾನೆ. ಇದರ ಕುರಿತು ನಿಖರ ಮಾಹಿತಿ ಪಡೆದ ಎಟಿಎಸ್ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.
ಭಾರತದ ಗಗನಯಾನ ಯೋಜನೆ ಹಾಗೂ ಸೇನೆಯ ಡ್ರೋನ್ ಗಳ ಕುರಿತ ದಾಖಲೆಗಳನ್ನು ಆರೋಪಿಯು ನೇಹಾ ಶರ್ಮಾಗೆ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯು ಹನಿಟ್ರ್ಯಾಪ್ ಗೆ ಒಳಗಾಗಿದ್ದು, ಮಹಿಳಾ ಐಎಸ್ಐ ಏಜೆಂಟ್ ನ ನಿರ್ದೇಶನದಂತೆ ರಹಸ್ಯ ದಾಖಲೆಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಉತ್ತರಪ್ರದೇಶ ಎಟಿಎಸ್ ಮಾಹಿತಿ ನೀಡಿದೆ.
ನೇಹಾ ಶರ್ಮಾ ಎಂಬ ಮಹಿಳೆಯ ಹೆಸರಿನ ಫೇಸ್ ಬುಕ್ ಖಾತೆ ಜೊತೆಗೆ ಆರೋಪಿ ರವೀಂದ್ರ ಕಳೆದ ವರ್ಷದಿಂದ ನಿತ್ಯ ಸಂಪರ್ಕದಲ್ಲಿದ್ದ. ಮಹಿಳಾ ಐಎಸ್ಐ ಏಜೆಂಟ್ ನೀಡಿದ್ದ ತನ್ನ ಮೊಬೈಲ್ ನಂಬರ್ಅನ್ನು ಆರೋಪಿಯು ಚಂದನ್ ಸ್ಟೋರ್ ಕೀಪರ್ 2 ಎಂದು ಸೇವ್ ಮಾಡಿಕೊಂಡಿದ್ದ. ಆಕೆಯು ಈತನಿಗೆ ಪ್ರೀತಿಯ ಮೋಹದ ಬಲೆಯಲ್ಲಿ ಬೀಳಿಸಿಕೊಂಡಿದ್ದಳು. ಇದಕ್ಕಾಗಿ ಆರೋಪಿಯು ಗೌಪ್ಯ ಮಾಹಿತಿ ಸೋರಿಕೆ ಮಾಡಿದ್ದ ಎನ್ನಲಾಗಿದೆ.