ನವದೆಹಲಿ: ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ (Shreyas Iyer) ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟೂರ್ನಿಯುದ್ದಕ್ಕೂ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. 5 ಪಂದ್ಯಗಳಲ್ಲಿ ಅಯ್ಯರ್ 48.60 ಸರಾಸರಿಯಲ್ಲಿ 248 ರನ್ ಗಳಿಸಿದ್ದಾರೆ. ಅವರು ಎರಡು ಅರ್ಧಶತಕಗಳನ್ನೂ ಬಾರಿಸಿದ್ದರು. ಆದರೆ, ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಅವರು ಶ್ರೇಯಸ್ ಅಯ್ಯರ್ ಫೈನಲ್ ಪಂದ್ಯದಲ್ಲಿ ಔಟ್ ಆದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 9ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡ 252 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿ ಹಿಂಬಾಲಿಸಿದ ಭಾರತ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ 62 ಎಸೆತಗಳಲ್ಲಿ 48 ರನ್ ಗಳಿಸಿ ತಂಡವನನ್ನು ಕಾಪಾಡಿದ್ದರು. ಆದರೆ, ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಅರ್ಧಶತಕ ಅವಕಾಶ ಕಳೆದುಕೊಂಡರು. ಇದರಿಂದಾಗಿ, ಉತ್ತಮ ಆರಂಭವನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸುವಲ್ಲಿ ಅವರು ವಿಫಲರಾದರು. ಆದರೂ, ಅಕ್ಷರ್ ಪಟೇಲ್ ಅವರೊಂದಿಗೆ 61 ರನ್ಗಳ ಜೊತೆಯಾಟ ಆಡಿದ್ದರು.
ದಿಲೀಪ್ ವೆಂಗ್ಸರ್ಕಾರ್ ಅವರ ಅಭಿಪ್ರಾಯ
“ಶ್ರೇಯಸ್ ಅಯ್ಯರ್ ತುಂಬಾ ಚೆನ್ನಾಗಿ ಆಡಿದ್ದಾರೆ, ಆದರೆ ಫೈನಲ್ನಲ್ಲಿ ಅವರು ಔಟ್ ಆದ ರೀತಿ ನನಗೆ ಸಂತೋಷವಾಗಿಲ್ಲ. ಅವರು ಕೊನೆಯವರೆಗೂ ಆಡಿ ಪಂದ್ಯವನ್ನು ಮುಗಿಸಬೇಕಿತ್ತು. ಆದರೆ ಅವರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡದ್ದನ್ನು ನೋಡುವುದು ಸಂತೋಷವಾಯಿತು,” ಎಂದು ಮಾಜಿ ಆಯ್ಕೆಗಾರ ದಿಲೀಪ್ ವೆಂಗ್ಸರ್ಕಾರ್ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಬಗ್ಗೆ ಹೇಳಿಕೆಯೇನು?
“ಕೆಎಲ್ ರಾಹುಲ್ ಕೂಡ ಆರನೇ ಕ್ರಮಾಂಕದಲ್ಲಿ ಕೆಲವು ಪ್ರಮುಖ ಇನಿಂಗ್ಸ್ಗಳನ್ನು ಆಡಿದ್ದಾರೆ. ಆದರೆ, ಅಕ್ಷರ್ ಪಟೇಲ್ ಐದನೇ ಕ್ರಮಾಂಕದಲ್ಲಿ ರಾಹುಲ್ಗಿಂತ ಮುಂಚೆ ಬ್ಯಾಟ್ ಮಾಡುತ್ತಾರೆಂದು ಹೇಳುವುದು ಕಷ್ಟ. ಇದಕ್ಕೆ ಎಡ-ಬಲಗೈ ಸಂಯೋಜನೆಯೇ ಕಾರಣವಾಗಿರಬಹುದು,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಕ್ಷರ್ ಪಟೇಲ್ ಅವರನ್ನು ಕೆಎಲ್ ರಾಹುಲ್ಗಿಂತ ಮುಂಚೆ ಬ್ಯಾಟಿಂಗ್ ಮಾಡುವಂತೆ ಮಾಡುವುದು ಭಾರತದ ಮಾಸ್ಟರ್ ಪ್ಲಾನ್ ಆಗಿತ್ತು. ಅಗ್ರಸ್ಥಾನದಲ್ಲಿ ಬ್ಯಾಟ್ ಮಾಡುವಾಗ, ಅಕ್ಷರ್ ಯಾವುದೇ ಒತ್ತಡವಿಲ್ಲದೆ ಆಡುತ್ತಿರುವುದು ಕಂಡುಬಂದಿತು. ನಂತರ ಕೆಎಲ್ ರಾಹುಲ್ ಸೇರಿದಂತೆ ಇತರ ಬ್ಯಾಟರ್ಗಳಿಗೆ ಪ್ರಯೋಜನ ನೀಡಿತು. ರಾಹುಲ್ ಒತ್ತಡವನ್ನು ಚೆನ್ನಾಗಿ ನಿಭಾಯಿಸಿ, ಪಂದ್ಯ ಗೆದ್ದ ನಂತರ ಮರಳುತ್ತಿದ್ದರು. ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ತಂಡ ಇಂಡಿಯಾ ಪರ ಫಿನಿಷರ್ ಪಾತ್ರ ವಹಿಸಿದ್ದಾರೆ ಮತ್ತು 5 ಪಂದ್ಯಗಳಲ್ಲಿ 140 ರನ್ಗಳನ್ನು ಗಳಿಸಿದ್ದಾರೆ.
ಆಯ್ಕೆ ಸಮಿತಿಗೆ ಮನ್ನಣೆ
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ವೆಂಗ್ಸರ್ಕಾರ್ ಉತ್ತಮ ಅಂಕ ನೀಡಿದ್ದಾರೆ. “ಇದರ ಶ್ರೇಯಸ್ಸು ಆಯ್ಕೆದಾರರಿಗೆ ಸಲ್ಲಬೇಕು,” ಎಂದು ಅವರು ಹೇಳಿದ್ದಾರೆ. ಆಸ್ಟ್ರೇಲಿಯಾ ಸರಣಿಯ ನಂತರ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿದ್ದು ಮತ್ತು ತಂಡದಲ್ಲಿ ಐದು ಸ್ಪಿನ್ನರ್ಗಳನ್ನು ಸೇರಿಸಿಕೊಳ್ಳುವ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಎಂದು ಸಾಬೀತಾಯಿತು ಎಂದು ಹೇಳಿದ್ದಾರೆ.