ಮಂಗಳೂರು:ಅಕ್ಕ-ಪಕ್ಕದವರ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ, ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಅಪಘಾತದಿಂದ ಕೊಲೆ ಮಾಡಲು (Murder Attempt) ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ. ಈ ವೇಳೆ ಅಮಾಯಕ ಮಹಿಳೆ ಗಾಯಗೊಂಡಿರುವ ಘಟನೆ ನಡೆದಿದೆ.
ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯಾತ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಗುದ್ದಲು ಮುಂದಾಗಿದ್ದಾನೆ. ಆದರೆ, ಅದರ ಬದಲು ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್ ಮೇಲೆ ನೇತಾಡಿದ್ದಾರೆ.
ಮುರಳಿ ಪ್ರಸಾದ್ನನ್ನು ಕೊಲ್ಲಲು ಸತೀಶ್ ಕುಮಾರ್ ಎಂಬಾತ ಯತ್ನಿಸಿದಾಗ ಈ ಘಟನೆ ನಡೆದಿದೆ. ಗುರುವಾರ ಮುರಳಿ ಪ್ರಸಾದ್ ಬೈಕ್ ನಲ್ಲಿ ಹೋಗುತ್ತಿರುವುದನ್ನು ನೋಡಿ ಸತೀಶ್ ಕುಮಾರ್ ಕಾರಿನಿಂದ ಗುದ್ದಲು ಯತ್ನಿಸಿದ್ದಾನೆ. ಆದರೆ, ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಮಹಿಳೆ ಮನೆಯೊಂದರ ಕಂಪೌಂಡ್ ಮೇಲೆ ನೇತಾಡಿದ್ದಾರೆ.
ಆನಂತರ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ. ಕಾರು ಚಾಲಕ ಸತೀಶ್ ಕುಮಾರ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲೂ ಸಹ ಹಿಟ್ ಆ್ಯಂಡ್ ರನ್ ಕೇಸ್ ಬುಕ್ ಆಗಿದೆ. ಘಟನೆಯಲ್ಲಿ ಅಪಘಾತಕ್ಕೀಡಾದ ಮಹಿಳೆ ಹಾಗೂ ಯುವಕ ಬದುಕುಳಿದಿದ್ದಾರೆ.