ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಮಹಮುದುಲ್ಲಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ 17 ವರ್ಷಗಳ ದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಕಳೆದ ವಾರ ಬಾಂಗ್ಲಾದೇಶದ ಇನ್ನೊಬ್ಬ ಅನುಭವಿ ಆಟಗಾರ ಮುಷ್ಫಿಕರ್ ರಹೀಮ್ ನಿವೃತ್ತಿ ಘೋಷಿಸಿದ್ದರು. ಒಂದು ವಾರದ ಅಂತರದಲ್ಲಿ ಇಬ್ಬರು ಬಾಂಗ್ಲಾ ಆಟಗಾರರು ನಿವೃತ್ತಿ ಹೊಂದಿದ್ದಾರೆ. “ನಾನು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ” ಎಂದು 39 ವರ್ಷೀಯ ಮಹಮುದುಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದಕ್ಕೂ ಮುಂಚೆ, ಅವರು 2021ರಲ್ಲಿ ಟೆಸ್ಟ್ ಕ್ರಿಕೆಟ್ನಿಂದಲೂ ಮತ್ತು 2024ರಲ್ಲಿ ಟಿ20 ಕ್ರಿಕೆಟ್ನಿಂದಲೂ ನಿವೃತ್ತಿ ಘೋಷಿಸಿದ್ದರು.
ಐಸಿಸಿ ಟೂರ್ನಮೆಂಟ್ಗಳಲ್ಲಿ ನಾಲ್ಕು ಶತಕಗಳನ್ನು ಸೇರಿದಂತೆ 36.46 ಸರಾಸರಿಯಲ್ಲಿ 5,689 ರನ್ಗಳನ್ನು ಗಳಿಸಿರುವ ಮಹಮುದುಲ್ಲಾ, ಬಾಂಗ್ಲಾದೇಶದ ನಾಲ್ಕನೇ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರರಾಗಿದ್ದಾರೆ. 2015ರ ವಿಶ್ವಕಪ್ನಲ್ಲಿ ಅವರು ಸತತ ಎರಡು ಶತಕಗಳನ್ನು ಗಳಿಸಿದ್ದರು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು 2023ರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ವಿಶ್ವಕಪ್ನಲ್ಲಿ ಶತಕ ಬಾರಿಸಿದ್ದರು.
ತಮ್ಮ ನಿವೃತ್ತಿ ಘೋಷಣೆಯ ಸಂದರ್ಭದಲ್ಲಿ ಮಹಮುದುಲ್ಲಾ , “ನನ್ನ ಬಾಲ್ಯದಿಂದಲೂ ನನ್ನ ಕೋಚ್ ಮತ್ತು ಮಾರ್ಗದರ್ಶಕರಾಗಿ ನಿರಂತರವಾಗಿ ನನ್ನ ಜೊತೆಗಿದ್ದ ಹೆತ್ತವರಿಗೆ, ಮಾವನಿಗೆ ಮತ್ತು ನನ್ನ ಸಹೋದರ ಎಮ್ದಾದ್ ಉಲ್ಲಾ ಅವರಿಗೆ ಧನ್ಯವಾದಗಳು. ಕೊನೆಯದಾಗಿ, ನನ್ನ ಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ನನ್ನ ಪತ್ನಿ ಮತ್ತು ಮಕ್ಕಳಿಗೆ ಕೃತಜ್ಞತೆ. ಕೆಂಪು ಮತ್ತು ಹಸಿರು ಜೆರ್ಸಿಯಲ್ಲಿ ದೇಶವನ್ನು ಇಷ್ಟು ವರ್ಷ ಪ್ರತಿನಿಧಿಸಿದ್ದು ನನ್ನ ಪಾಲಿನ ಸೌಭಾಗ್ಯ. ಬಾಂಗ್ಲಾದೇಶ ಕ್ರಿಕೆಟ್ಗೆ ಶುಭಾಶಯಗಳು.” ಎಂದು ಹೇಳಿದ್ದಾರೆ.
17 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ, ಮಹಮುದುಲ್ಲಾ 239 ಏಕದಿನ, 50 ಟೆಸ್ಟ್ ಮತ್ತು 141 ಟಿ20 ಪಂದ್ಯಗಳನ್ನು ಆಡಿದ್ದಾರೆ. 2007ರಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಅವರು, ಆರಂಭದಲ್ಲಿ ಕೆಳ ಕ್ರಮಾಂಕದ ಆಲ್ರೌಂಡರ್ ಆಗಿ ಆಡಿದ್ದರು. ನಿವೃತ್ತಿಯ ನಂತರವೂ ಬಾಂಗ್ಲಾದೇಶ ಕ್ರಿಕೆಟ್ಗೆ ಅವರ ಕೊಡುಗೆ ಮುಂದುವರಿಯಲಿದೆ ಎಂದು ನಂಬಲಾಗಿದೆ.