ಮುಂಬೈ: ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ತವರಿಗೆ ಮರಳಿದ ಭಾರತೀಯ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ರಾಹುಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿಯ ಹೊಟ್ಟೆಯನ್ನು ತಬ್ಬಿಕೊಂಡು ಸೋಫಾದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳ ಜತೆಗೆ, “ಮೂವರಾಗುವ ಸನಿಹದಲ್ಲಿ” ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಅಥಿಯಾ ಶೆಟ್ಟಿ ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ. ಇದರಿಂದಾಗಿ, ರಾಹುಲ್ ಐಪಿಎಲ್ 2024 ಋತುವಿನ ಆರಂಭಿಕ ಪಂದ್ಯಗಳಲ್ಲಿ ಭಾಗವಹಿಸದೇ ಇರಬಹುದು ಎಂದು ಅಂದಾಜಿಸಲಾಗಿದೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುವ ರಾಹುಲ್ ತಂಡದ ನಾಯಕತ್ವ ವಹಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಬದಲಿಗೆ, ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಬಯಸಿದ್ದಾರೆ. ಕಳೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಾಹುಲ್ ಅವರನ್ನು 14 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು.
https://www.instagram.com/p/DHGYFxUM_Ks/?utm_source=ig_web_button_share_sheet
ಇದೇ ನಡುವೆ, ಬಿಸಿಸಿಐಯ ಹೊಸ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ರಾಹುಲ್ ಮುಂಬಡ್ತಿ ಪಡೆಯುವ ಸಾಧ್ಯತೆ ಇದೆ. ಸದ್ಯ ರಾಹುಲ್ ‘ಎ’ ದರ್ಜೆಯ ಗುತ್ತಿಗೆ ಪಟ್ಟಿಯಲ್ಲಿದ್ದಾರೆ. ಆದರೆ, ಅವರನ್ನು ‘ಎ+’ ದರ್ಜೆಗೆ ಏರಿಸುವ ಚರ್ಚೆ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಸಾಧಾರಣ ಪ್ರದರ್ಶನ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ, ಭಾರತ ಕೊನೆಯ ಕ್ಷಣಗಳಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ, ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಅಜೇಯ 34 ರನ್ ಗಳಿಸಿ ತಂಡವನ್ನು ಗೆಲುವಿನ ದಾರಿಗೆ ನಡೆಸಿದ್ದರು.
ಕೆ.ಎಲ್. ರಾಹುಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಐದನೇ ಕನ್ನಡಿಗ ಕ್ರಿಕೆಟರ್ ಎನಿಸಿದ್ದಾರೆ. ಇವರಿಗಿಂತ ಮುಂಚೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವಿನಯ್ ಕುಮಾರ್ ಈ ಸಾಧನೆ ಮಾಡಿದ್ದರು. ರಾಹುಲ್ ಮತ್ತು ಅಥಿಯಾ ದಂಪತಿಯ ಮೊದಲ ಮಗುವಿನ ನಿರೀಕ್ಷೆಯೊಂದಿಗೆ, ಅವರ ಕುಟುಂಬ ಜೀವನ ಮತ್ತು ಕ್ರಿಕೆಟ್ ವೃತ್ತಿ ಎರಡರಲ್ಲೂ ಹೊಸ ಅಧ್ಯಾಯ ಆರಂಭವಾಗಲಿದೆ.