ತುಮಕೂರು: ಸಾಮಾಜಿಕ ಜಾಲತಾಣವೊಂದರಲ್ಲಿ ಪರಿಯವಾಗಿದ್ದವಳು ಗ್ರಾಪಂ ಮಾಜಿ ಅಧ್ಯಕ್ಷರಿಗೆ ಹನಿಟ್ರ್ಯಾಪ್ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹನಿಟ್ರ್ಯಾಪ್ ಮಾಡಿದ ಚೆಲುವೆ ಆತನಿಗೆ ಗೊತ್ತಿಲ್ಲದಂತೆ ಬೆತ್ತಲೆ ವಿಡಿಯೋ ಮಾಡಿಕೊಂಡು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.
ಗ್ರಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಎಂಬುವವರೇ ಹನಿಟ್ರ್ಯಾಪ್ ಗೆ ಒಳಗಾದವರು. ಅಣ್ಣಪ್ಪಸ್ವಾಮಿಗೆ ಫೇಸ್ ಬುಕ್ ನಲ್ಲಿ ಪರಚಿಯವಾಗಿದ್ದ ನಿಶಾ, ಸಲುಗೆ ಬೆಳೆಸಿದ್ದಾಳೆ. ಆರಂಭದಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಗಳನ್ನು ಹಾಕಿ ಸಲುಗೆ ಬೆಳೆಸಿಕೊಂಡಿದ್ದಾಳೆ. ಆನಂತರ ಭೇಟಿಯಾಗಿದ್ದಾಳೆ. ನಂತರ ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡೋಣ ಎಂದು ಬುಟ್ಟಿಗೆ ಹಾಕಿಕೊಂಡು, ಈಗ ಹನಿಟ್ರ್ಯಾಪ್ ಅಡ್ಡಾಗೆ ಕೆಡವಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಮದುವೆಯಾಗಿರುವ ಈಕೆ, ಅಣ್ಣಪ್ಪಸ್ವಾಮಿಯನ್ನು ಪ್ರೀತಿಯ ಬಲೆಗೆ ಕೆಡವಿಕೊಂಡಿದ್ದಾಳೆ. ಆನಂತರ ತನ್ನ ಗಂಡ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನೀನೇ ನನ್ನನ್ನು ಮದುವೆಯಾಗು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದೆಲ್ಲಾ ಹೇಳಿದ್ದಾಳೆ. ಅಣ್ಣಪ್ಪ ಸ್ವಾಮಿಯ ಕಾರಿನಲ್ಲಿ ಅಲ್ಲಲ್ಲಿ ಸುತ್ತಾಡಿದ್ದಾಳೆ. ಹಲವಾರು ಬಾರಿ ಲಾಡ್ಜ್ ಗೆ ಕರೆದೊಯ್ದಿದ್ದಾಳೆ. ಇದೆಲ್ಲವನ್ನೂ ಆಕೆಯ ಹಿಂದಿದ್ದ ಒಂದು ಗ್ಯಾಂಗ್ ಗಮನಿಸುತ್ತಲೇ ಇದೆ. ಈ ಹಂತದಲ್ಲಿ ಸಕ್ರಿಯವಾದ ಆಕೆಯ ಗ್ಯಾಂಗ್ ಹನಿಟ್ರ್ಯಾಪ್ ಗೆ ಖೆಡ್ಡಾ ರೆಡಿ ಮಾಡಿದೆ. ಅದರಂತೆ ಚಿಕ್ಕಬಳ್ಳಾಪುರದ ಲಾಡ್ಜ್ ಒಂದಕ್ಕೆ ಇಬ್ಬರೂ ಹೋಗಿದ್ದಾರೆ. ಅಲ್ಲಿ ಆತನಿಗೆ ಗೊತ್ತಿಲ್ಲದಂತೆ ಆಕೆಯ ಗ್ಯಾಂಗ್ ವಿಡಿಯೋ ಮಾಡಿಕೊಂಡಿದೆ.
ಕೆಲವು ದಿನಗಳ ನಂತರ ಆತನನ್ನು ಬ್ಲ್ಯಾಕ್ ಮೇಲ್ ಮಾಡಲು ಗ್ಯಾಂಗ್ ಸದಸ್ಯರನ್ನು ಛೂ ಬಿಟ್ಟಿದ್ದಾಳೆ. ಆ ಗ್ಯಾಂಗ್ ವಿಡಿಯೋ ತೋರಿಸಿ 20 ಲಕ್ಷ ರೂ.ಗಳಿಗೆ ಬೇಡಿಕೆಯಿಟ್ಟಿದೆ. ಹಣ ಕೊಡದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಅಣ್ಣಪ್ಪಸ್ವಾಮಿ, ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ತುಮಕೂರಿನ ಕ್ಯಾತ್ಸಂದ್ರ ನಿವಾಸಿಯಾದ ನಿಶಾ, ಆಕೆಯ ಸ್ನೇಹಿತೆ ಜ್ಯೋತಿಯನ್ನು ಬಂಧಿಸಿದ್ದಾರೆ. ತಂಡದಲ್ಲಿರುವ ಬಸವರಾಜು, ಭರತ್ ಎಂಬುವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.