ಹೈದರಾಬಾದ್: ಕಾಂಗ್ರೆಸ್ ಆಡಳಿತದಲ್ಲಿ ತಾನು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡಿರುವ ರೈತನೊಬ್ಬನ “ವಿವಾದಾತ್ಮಕ” ವೀಡಿಯೋ(Video)ವನ್ನು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಇಬ್ಬರು ಪತ್ರಕರ್ತರನ್ನು ಹೈದರಾಬಾದ್ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ತೆಲಂಗಾಣದ(Telangana News) ರಾಜಧಾನಿ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವರದಿಗಳ ಪ್ರಕಾರ, ಹಿರಿಯ ಪತ್ರಕರ್ತೆ ರೇವತಿ ಮತ್ತು ಅವರ ಸಹೋದ್ಯೋಗಿ ತನ್ವಿ ಯಾದವ್ ಅವರನ್ನು ಬುಧವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಂಧಿಸಲಾಗಿದೆ. ಇದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸರ್ಕಾರದ ಸರ್ವಾಧಿಕಾರಿ ನಡೆಯಾಗಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರತಿಪಕ್ಷ ಬಿಆರ್‌ಎಸ್ ಮತ್ತು ಬಿಜೆಪಿ ಹೇಳಿವೆ.
ಬೆಳಗಿನ ಜಾವ ನಡೆದ ಈ ದಾಳಿಯು ನನಗೆ ಕಾಂಗ್ರೆಸ್‌ನ ತುರ್ತು ಪರಿಸ್ಥಿತಿಯ ಯುಗವನ್ನು ನೆನಪಿಸಿದೆ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಬಣ್ಣಿಸಿದ್ದಾರೆ. “ರೈತನೊಬ್ಬ ತನ್ನ ಕಷ್ಟಗಳ ಬಗ್ಗೆ ಹೇಳಿಕೊಂಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತರನ್ನು ಬಂಧಿಸಿರುವುದು ಸರ್ವಾಧಿಕಾರಿ ಆಡಳಿತದ ಉತ್ತುಂಗವಾಗಿದೆ. ರಾಹುಲ್ ಗಾಂಧಿ ಅವರು ಹೇಳುವ “ಸಾಂವಿಧಾನಿಕ ನಿಯಮ” ಇದೇನಾ? ಅವರು ಹೇಳುವ ಪತ್ರಿಕಾ ಸ್ವಾತಂತ್ರ್ಯ ಇದೇನಾ?” ಎಂದು ಪ್ರಶ್ನಿಸಿದ ಅವರು, ಇಂತಹ ದಮನಕಾರಿ ಕ್ರಮಗಳನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ತೆಲಂಗಾಣ ಬಿಜೆಪಿ ವಕ್ತಾರ ಮತ್ತು ನರಸಿಂಹ ರಾವ್ ಅವರ ಮೊಮ್ಮಗ ಎನ್.ವಿ.ಸುಭಾಸ್ ಕೂಡ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಮನಕಾರಿ ನೀತಿಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ತೆಲಂಗಾಣವು ಪ್ರಜಾಪ್ರಭುತ್ವದ ಅಡಿಯಲ್ಲಿದೆಯೇ ಅಥವಾ ಸರ್ವಾಧಿಕಾರದಲ್ಲಿದೆಯೇ ಎಂದು ಬಿಆರ್‌ಎಸ್ ಹಿರಿಯ ಮುಖಂಡ ಟಿ. ಹರೀಶ್ ರಾವ್ ಪ್ರಶ್ನಿಸಿದರೆ, ಬಿಆರ್‌ಎಸ್ ಎಂಎಲ್ಸಿ ಕೆ.ಕವಿತಾ ಅವರು, “ರೇವಂತ್ ರೆಡ್ಡಿ ಅವರ ಆಡಳಿತವನ್ನು ಪ್ರಶ್ನಿಸುವಂಥ ಧೈರ್ಯ ಮಾಡುವವರು ರಾಜ್ಯದಲ್ಲಿ ನಿಂದನೆ, ಬೆದರಿಕೆ ಅಥವಾ ಬಂಧನವನ್ನು ಎದುರಿಸಬೇಕಾಗಿದೆ” ಎಂದು ಕಿಡಿಕಾರಿದ್ದಾರೆ.
“ಈ ಸರ್ಕಾರಕ್ಕೆ ಯಾರಾದರೂ ಅಹಿತಕರ ಪ್ರಶ್ನೆ ಕೇಳಿದೊಡನೆ ಅವರಿಗೆ ಬಂಧನದ ಉತ್ತರ ನೀಡಲಾಗುತ್ತದೆ. ಬೆಳಗ್ಗೆ 5 ಗಂಟೆಗೆ ಪತ್ರಕರ್ತೆ ರೇವತಿ ಅವರನ್ನು ಬಂಧಿಸಿರುವುದು ಕಾಂಗ್ರೆಸ್‌ನ ಅಭದ್ರತೆ ಮತ್ತು ಹೇಡಿತನವನ್ನು ತೋರಿಸಿದೆ. ಜನರ ಧ್ವನಿಗಳನ್ನು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ನಾಚಿಕೆಗೇಡಿನ ಪ್ರಯತ್ನ ಖಂಡನೀಯ” ಎಂದು ಹರೀಶ್ ರಾವ್ ಹೇಳಿದ್ದಾರೆ.