ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಕಾರು ಖರೀದಿಸಿದ್ದಾರೆ. ಕೆಂಪು ಬಣ್ಣದ, ಹೊಳೆಯುವ ಟೆಸ್ಲಾ ಎಸ್ ಮಾಡೆಲ್ ಕಾರನ್ನು ಡೊನಾಲ್ಡ್ ಟ್ರಂಪ್ ಅವರು ಖರೀದಿಸಿದ್ದಾರೆ. ಇದಾದ ಬಳಿಕ ಎಲಾನ್ ಮಸ್ಕ್ ಹಾಗೂ ಡೊನಾಲ್ಡ್ ಟ್ರಂಪ್ ಅವರು ಹೊಸ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಡೊನಾಲ್ಡ್ ಟ್ರಂಪ್ ಬಳಿ ಬಂದ ಎಲಾನ್ ಮಸ್ಕ್, ಅಮೆರಿಕ ಅಧ್ಯಕ್ಷ ಹೊಸ ಕಾರಿನಲ್ಲಿ ಕುಳಿತುಕೊಳ್ಳಲು ನೆರವು ನೀಡಿದ್ದಾರೆ. ಹೊಳೆಯುವ ಕಾರಿನಲ್ಲಿ ಕುಳಿತ ಡೊನಾಲ್ಡ್ ಟ್ರಂಪ್, ವಾಹ್ ಇದು ಅದ್ಭುತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಡಿಸ್ಕೌಂಟ್ ಪಡೆದಿಲ್ಲ ಎಂದ ಟ್ರಂಪ್
ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಐಷಾರಾಮಿ ಕಾರು ಖರೀದಿಸಿದ ಬಳಿಕ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, “ಎಲಾನ್ ಮಸ್ಕ್ ಒಬ್ಬ ಅಪ್ರತಿಮ ದೇಶಭಕ್ತರಾಗಿದ್ದಾರೆ. ಆದರೆ, ಅವರಿಂದ ಕಾರು ಖರೀದಿಸಲು ನಾನು ಡಿಸ್ಕೌಂಟ್ ಕೇಳಿಲ್ಲ” ಎಂದಿದ್ದಾರೆ. ಎಲಾನ್ ಮಸ್ಕ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಎಲಾನ್ ಮಸ್ಕ್ ದೇಶಭಕ್ತರಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಶಿಕ್ಷೆ ನೀಡಲು ಆಗದು. ಟೆಸ್ಲಾ ಕಂಪನಿ ಮೂಲಕ ಮಸ್ಕ್ ಕ್ರಾಂತಿ ಮಾಡಿದ್ದಾರೆ” ಎಂದು ಬಣ್ಣಿಸಿದ್ದಾರೆ.
ಎಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರ ಆತ್ಮೀಯ ಸ್ನೇಹಿತರಾಗಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಎಲಾನ್ ಮಸ್ಕ್ ಅವರು ಟ್ರಂಪ್ ಪರವಾಗಿ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದರು. ಇನ್ನು ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಲೇ ಅಮೆರಿಕ ಸರ್ಕಾರದ ಕಾರ್ಯದಕ್ಷತೆ ಇಲಾಖೆಯ(DOGE) ಮುಖ್ಯಸ್ಥರನ್ನಾಗಿ ಎಲಾನ್ ಮಸ್ಕ್ ಅವರನ್ನು ನೇಮಿಸಿದ್ದಾರೆ.