ಬೆಂಗಳೂರು: ಸಿಲಿಕಾನ್ ಸಿಟಿ (Bengaluru) ಮಂದಿ ಬಿಸಿಲಿನ ತಾಪಾಮಾನಕ್ಕೆ ಬೆಂದು ಹೋಗಿದ್ದರು. ಆದರೆ, ಇಂದು ಸಂಜೆ ವರುಣ ತಂಪೆರೆಯುವ ಕೆಲಸ ಮಾಡಿದ್ದಾನೆ. ಮಂಗಳವಾರ ಸಂಜೆ ನಗರದ ಹಲವು ಪ್ರದೇಶಗಳಲ್ಲಿ ದಿಢೀರ್ ಮಳೆಯಾಗಿದೆ (Rains).
ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣನ ಸಿಂಚನ ತುಸು ಸಮಾಧಾನ ನೀಡಿದೆ. ಇದರಿಂದಾಗಿ ಜನರಿಗೆ ತಂಪನೆಯ ವಾತಾವರಣ ಸಿಕ್ಕಂತಾಗಿದೆ.
ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ 14ರ ವರೆಗೆ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈಗ ಮುನ್ಸೂಚನೆಯಂತೆ ಮಳೆಯಾಗಿದೆ. ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದ ಜನ ಫುಲ್ ಖುಷ್ ಆಗಿದ್ದಾರೆ. ಹೀಗಾಗಿ ಬೆಂಗಳೂರು ಕೊಂಚ ಕೂಲ್ ಕೂಲ್ ಎನ್ನುವಂತಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಾರ್ಚ್ 11 ರಿಂದ 13 ರವರೆಗೆ ಬೆಂಗಳೂರು ನಗರ ಸೇರಿದಂತೆ 12 ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.