ಷಿಕಾಗೋ: ಷಿಕಾಗೋದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ AI126 ಸುಮಾರು 10 ಗಂಟೆಗಳ ಕಾಲ ಪ್ರಯಾಣ ನಡೆಸಿ, ಬಳಿಕ ಷಿಕಾಗೋ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ, ವಿಮಾನದ ಟಾಯ್ಲೆಟ್!
ಏರಿಂಡಿಯಾ ವಿಮಾನದಲ್ಲಿದ್ದ 12 ಟಾಯ್ಲೆಟ್‌ಗಳ ಪೈಕಿ 11 ಶೌಚಾಲಯಗಳು ಕಟ್ಟಿಕೊಂಡ ಕಾರಣ, 300ಕ್ಕೂ ಹೆಚ್ಚು ಪ್ರಯಾಣಿಕರು ಕೇವಲ ಒಂದೇ ಒಂದು ಶೌಚಾಲಯದ ಮೊರೆ ಹೋಗಬೇಕಾಗಿ ಬಂದಿತ್ತು. ಇದರಿಂದ ಪ್ರಯಾಣಿಕರು ಭಾರೀ ತೊಂದರೆ ಅನುಭವಿಸಬೇಕಾಯಿತು. ಹಲವು ಗಂಟೆಗಳ ಹಾರಾಟದ ಬಳಿಕ ಈ ದೋಷದ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪೈಲಟ್‌ಗಳು ಕೊನೆಗೆ ವಿಮಾನವನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡರು.
10 ಗಂಟೆಗಳ ಪರದಾಟ
ಮಾರ್ಚ್ 6ರಂದು ಷಿಕಾಗೋದಿಂದ ದೆಹಲಿಗೆ ಹೊರಟಿದ್ದ ಈ ವಿಮಾನದಲ್ಲಿ, ಹಾರಾಟ ಆರಂಭಿಸಿದ ನಾಲ್ಕೂವರೆ ಗಂಟೆಗಳ ಬಳಿಕ ಗ್ರೀನ್‌ಲ್ಯಾಂಡ್ ವ್ಯಾಪ್ತಿಗೆ ಬರುತ್ತಿದ್ದಂತೆ ಟಾಯ್ಲೆಟ್ ಸಮಸ್ಯೆ ತಲೆದೋರಿತು. ವಿಮಾನದಲ್ಲಿ ಕೇವಲ ಒಂದು ಶೌಚಾಲಯ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಉಳಿದ 11 ಟಾಯ್ಲೆಟ್‌ಗಳು ಸಂಪೂರ್ಣವಾಗಿ ಕಟ್ಟಿಕೊಂಡ ಕಾರಣ, ಅವುಗಳನ್ನು ಬಳಸಲು ಸಾಧ್ಯವಾಗದಂಥ ಸ್ಥಿತಿಯಿತ್ತು. ಹೀಗಾಗಿ ಪ್ರಯಾಣಿಕರು ಶೌಚಾಲಯಕ್ಕೆ ಹೋಗಲು ವಿಮಾನದಲ್ಲೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ಎಲ್ಲರೂ ವಿಮಾನದ ಸಿಬ್ಬಂದಿ ಮುಂದೆ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಪೈಲಟ್‌ಗಳು ಈ ಗಂಭೀರ ಸಮಸ್ಯೆಯನ್ನು ಅರಿತು, ಹಿಂತಿರುಗುವ ನಿರ್ಧಾರ ಕೈಗೊಂಡರು. ಮತ್ತೆ ಷಿಕಾಗೋಗೆ ಮರಳಲು ನಾಲ್ಕೂವರೆ ಗಂಟೆ ಹಿಡಿಯಿತು. ಹೀಗಾಗಿ ಒಟ್ಟು 10 ಗಂಟೆಗಳ ಕಾಲ ಪ್ರಯಾಣಿಕರು ಪರದಾಡಬೇಕಾಯಿತು. ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಏರ್ ಇಂಡಿಯಾ ಸ್ಪಷ್ಟನೆ: ಪರ್ಯಾಯ ವಿಮಾನ ವ್ಯವಸ್ಥೆ
ಏರ್ ಇಂಡಿಯಾ ವಕ್ತಾರರು ಈ ಘಟನೆಯ ಕುರಿತು ಪ್ರತಿಕ್ರಿಯಿಸಿ, “ತಾಂತ್ರಿಕ ಸಮಸ್ಯೆಯಿಂದಾಗಿ, ಷಿಕಾಗೋ-ದೆಹಲಿ ಮಾರ್ಗದ AI126 ವಿಮಾನ ಹಿಂತಿರುಗಿದೆ. ವಿಮಾನ ಷಿಕಾಗೋಗೆ ಮರಳಿದ ನಂತರ, ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ. ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದಿದ್ದಾರೆ. ಜೊತೆಗೆ, ಯಾರಾದರೂ ಬಯಸಿದರೆ, ಅವರಿಗೆ ಪೂರ್ಣ ಹಣ ಮರುಪಾವತಿ ಅಥವಾ ಉಚಿತವಾಗಿ ಮತ್ತೆ ಟಿಕೆಟ್ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದೂ ತಿಳಿಸಿದ್ದಾರೆ.