ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತ ತಂಡವನ್ನು ಟ್ರೋಫಿ ಗೆಲುವಿನತ್ತ ಮುನ್ನಡೆಸಿದ ನಾಯಕ ರೋಹಿತ್ ಶರ್ಮಾ, ಸದ್ಯ ಕ್ರಿಕೆಟ್‌ಗೆ ವಿದಾಯ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್‌ಗಳಿಂದ ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುವುದಾಗಿ ಘೋಷಿಸಿದರು.
“ಇನ್ನೊಂದು ವಿಷಯ. ನಾನು ಈ ಸ್ವರೂಪದಿಂದ ನಿವೃತ್ತಿ ಪಡೆಯುತ್ತಿಲ್ಲ. ಮುಂದೆ ಯಾವುದೇ ವದಂತಿಗಳು ಹರಡಲ್ಲ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಹೇಳುತ್ತಿದ್ದೇನೆ. ಧನ್ಯವಾದಗಳು,” ಎಂದು ರೋಹಿತ್ ಹೇಳಿದರು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವು ಸಕ್ರಿಯ ಭಾರತೀಯ ಕ್ರಿಕೆಟಿಗನಾಗಿ ರೋಹಿತ್ ಅವರ ಕೊನೆಯ ಪಂದ್ಯ ಎಂಬ ವದಂತಿಗಳು ಹರಡುತ್ತಿದ್ದವು. ಆದರೆ, 38 ವರ್ಷದ ಆಟಗಾರನ ಫಿಟ್‌ನೆಸ್ ಮತ್ತು ಫಾರ್ಮ್ ನೋಡಿದರೆ, ಅವರ ನಿವೃತ್ತಿಗೆ ಇನ್ನೂ ಸ್ವಲ್ಪ ಸಮಯವಿದೆ ಎಂಬುದು ಸ್ಪಷ್ಟವಾಗುತ್ತದೆ.
ನಿವೃತ್ತಿ ವದಂತಿಗಳ ಹಿನ್ನೆಲೆ
ಇತ್ತೀಚೆಗೆ ಅಂತ್ಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ, ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ರೋಹಿತ್ ಆಡುವ ಬಳಗದಿಂದ ಹೊರಗುಳಿದಾಗ ನಿವೃತ್ತಿ ವದಂತಿ ಮುನ್ನೆಲೆಗೆ ಬಂದಿತ್ತು. ಬಾಕ್ಸಿಂಗ್ ಡೇ ಟೆಸ್ಟ್ ಮುಗಿದ ಬಳಿಕ ರೋಹಿತ್ ನಿವೃತ್ತಿ ಘೋಷಿಸುತ್ತಾರೆ ಎಂದು ವರದಿಯಾಗಿತ್ತು. ಆದರೆ, ರೋಹಿತ್ ತಾನು ಆಡುವುದು ಮುಂದುವರೆಸಿದ್ದಾರೆ.
ರೋಹಿತ್ ಶರ್ಮಾ ಮುಂದಿನ ನಡೆಯೇನು?
ಸದ್ಯ ತಾನು ಏಕದಿನ ಸ್ವರೂಪದಲ್ಲಿ ಆಡುವುದನ್ನು ಮುಂದುವರೆಸುವುದಾಗಿ ರೋಹಿತ್ ಪ್ರತಿಜ್ಞೆ ಮಾಡಿದ್ದರೂ, ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್‌ನಲ್ಲಿ ಆಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಏಕೆಂದರೆ ಟೂರ್ನಿಗೆ ಇನ್ನೂ ಎರಡು ವರ್ಷಗಳಿವೆ. ನಾಯಕನಾಗಿ ರೋಹಿತ್ ಶರ್ಮಾ ಅವರು ಈ ಹಿಂದೆ ಎಂಎಸ್ ಧೋನಿ ಮಾಡಿದ ಸಾಧನೆ ಮಾಡಿದ್ದಾರೆ. ಒಂದಕ್ಕಿಂತ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಭಾರತವನ್ನು ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಮುನ್ನಡೆಸಿದ್ದಾರೆ. ಒಂದು ವೇಳೆ 2023ರ ನವೆಂಬರ್ 19ರಂದು ಏಕದಿನ ವಿಶ್ವಕಪ್ ಗೆಲ್ಲುತ್ತಿದ್ದರೆ ವಿಶ್ವ ದಾಖಲೆಯಾಗುತ್ತಿತ್ತು. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಎಲ್ಲಾ ಮೂರು ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ದಾಖಲೆ ರೋಹಿತ್ ಹೆಸರಿನಲ್ಲಿ ದಾಖಲಾಗುತ್ತಿತ್ತು.
ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವು
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಗೆದ್ದಿತು. ನ್ಯೂಜಿಲೆಂಡ್ ನೀಡಿದ್ದ 252 ರನ್ಗಳ ಗುರಿ ಬೆನ್ನಟ್ಟಿದ ಭಾರತ, 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು. ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕನ ಆಟವಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. 76 ರನ್ ಗಳಿಸುವ ಮೂಲಕ ಶುಭ್ಮನ್ ಗಿಲ್ ಜೊತೆಗೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. ಭಾರತದ ಗೆಲುವಿನಲ್ಲಿ ಇದು ಪ್ರಮುಖ ಪಾತ್ರ ವಹಿಸಿತು.
ರೋಹಿತ್ ಶರ್ಮಾ ಅವರ ನಾಯಕತ್ವ ಮತ್ತು ಆಟದ ಸಾಮರ್ಥ್ಯವು ಭಾರತೀಯ ಕ್ರಿಕೆಟ್‌ಗೆ ಹೊಸ ಹಂತವನ್ನು ತಂದಿದೆ. ಅವರ ಮುಂದಿನ ಪಯಣವು ಎಲ್ಲಾ ಅಭಿಮಾನಿಗಳಿಗೆ ಆಶಾದಾಯಕವಾಗಿದೆ.