ವಾಷಿಂಗ್ಟನ್: ಭಾರತ, ಚೀನಾ ಸೇರಿ ಹಲವು ರಾಷ್ಟ್ರಗಳ ಮೇಲೆ ಸುಂಕದ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೀಗ ಮತ್ತೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. “ಭಾರತವು ಈಗ ಆಮದು ಸುಂಕವನ್ನು ಕಡಿತಗೊಳಿಸುತ್ತೇವೆ ಎಂದು ಹೇಳಿದೆ. ಕೊನೆಗೂ ಸುಂಕದ ವಿಚಾರದಲ್ಲಿ ಭಾರತದ ಬಣ್ಣ ಬಯಲಾಗಿದೆ. ಇದುವರೆಗೆ ಭಾರತ ಎಷ್ಟು ಸುಂಕವನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿದೆ ಎಂಬುದು ಗೊತ್ತಾಗಿದೆ” ಎಂದು ಹೇಳಿದ್ದಾರೆ.
“ಭಾರತವು ಅಮೆರಿಕದ ಉತ್ಪನ್ನಗಳಿಗೆ ವಿಪರೀತವಾಗಿ ಸುಂಕ ಹೇರುತ್ತವೆ. ನಾವು ಭಾರತದಲ್ಲಿ ಏನನ್ನೂ ಮಾರಾಟ ಮಾಡಬಾರದು ಎನ್ನುವಷ್ಟರಮಟ್ಟಿಗೆ ಸುಂಕ ವಿಧಿಸುತ್ತದೆ. ಇದು ನ್ಯಾಯಸಮ್ಮತವಲ್ಲ. ಈಗ ಕೊನೆಗೂ ಭಾರತವು ಸುಂಕವನ್ನು ಕಡಿತಗೊಳಿಸಲು ಬಯಸಿದೆ” ಎಂದು ಹೇಳಿದ್ದಾರೆ.
“ನಮಗೆ ಹೆಚ್ಚು ತೆರಿಗೆ ವಿಧಿಸುವ ದೇಶಗಳಿಗೆ ನಾವು ಕೂಡ ಪ್ರತಿಯಾಗಿ ಆಮದು ಸುಂಕ ಹೆಚ್ಚಿಸುತ್ತೇವೆ. ಭಾರತ ಸೇರಿ ಹಲವು ದೇಶಗಳು ದಶಕಗಳಿಂದ ಅಮೆರಿಕಕ್ಕೆ ಹೆಚ್ಚು ಸುಂಕ ವಿಧಿಸಿವೆ. ನ್ಯಾಯಸಮ್ಮತವಲ್ಲದ ವ್ಯಾಪಾರದ ನೀತಿ ಅನುಸರಿಸಿವೆ. ಹಾಗಾಗಿ, ಭಾರತ ಸೇರಿ ಹಲವು ರಾಷ್ಟ್ರಗಳಿಗೆ ನಾವು ಕೂಡ ಪ್ರತಿ ಸುಂಕ (Reciprocal Tariffs) ವಿಧಿಸುತ್ತೇವೆ. ಏಪ್ರಿಲ್ 2ರಿಂದಲೇ ನೂತನ ಸುಂಕ ಜಾರಿಗೆ ಬರಲಿದೆ” ಎಂದು ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದರು.
“ಭಾರತವು ನಮಗೆ ಶೇ.100ಕ್ಕಿಂತ ಹೆಚ್ಚು ಆಮದು ಸುಂಕ ವಿಧಿಸುತ್ತದೆ. ಚೀನಾಗೆ ನಾವು ವಿಧಿಸುವ ಸುಂಕಕ್ಕಿಂತ ಅದು ನಮ್ಮಿಂದ ದುಪ್ಪಟ್ಟು ವಸೂಲಿ ಮಾಡುತ್ತದೆ. ದಕ್ಷಿಣ ಕೊರಿಯಾದ ಸುಂಕವು ಸರಾಸರಿಗಿಂತ ನಾಲ್ಕು ಪಟ್ಟು ಜಾಸ್ತಿಯಾಗಿದೆ. ಹಾಗಾಗಿ, ನಾವು ಕೂಡ ಏಪ್ರಿಲ್ 2ರಿಂದ ಹೆಚ್ಚು ಸುಂಕ ವಿಧಿಸುತ್ತೇವೆ” ಎಂದು ಅಮೆರಿಕ ಸಂಸತ್ತಿನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದರು.